ಬರಲಿವೆ ಇನ್ನೂ ಹತ್ತಾರು ಬ್ಯಾಂಕುಗಳು

ಸಂಭವನೀಯ ಬ್ಯಾಂಕುಗಳ ಹೆಸರುಗಳು... ಖಾಸಗಿಯಾಗಿ ಆದಿತ್ಯ ಬಿರ್ಲಾ ಗ್ರೂಪ್, ಎಂ ಅಂಡ್ ಎಂ, ಎಲ್ ಅಂಡ್ ಟಿ ಮತ್ತು ಸರಕಾರಿ ಪಿಎಫ್ ಸಿ, ಎಲ್ ಐಸಿ, ಅಂಚೆ ಇಲಾಖೆ ಮುಂತಾದವು. ಮುಂದಿನ ಆಗಸ್ಟಿನಿಂದ ಈ ಬ್ಯಾಂಕುಗಳು ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ.
ಇವುಗಳ ಜತೆಗೆ ಐಎಫ್ ಸಿಐ, ಶ್ರೀರಾಮ್ ಗ್ರೂಪ್, ರೆಲಿಗೇರ್, ಎಡಿಎ ಗ್ರೂಪ್, ಇಂಡಿಯಾ ಇನ್ಫೋಲೈನ್, ಇಂಡಿಯಾ ಬುಲ್ಸ್. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ಸಹ ಖಾಸಗಿ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸುವ ಸಾಧ್ಯತೆಯಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ.
ಉದಾರೀಕರಣದ ಬೀಸುಗಾಳಿಯಲ್ಲಿ: ಭಾರತದಲ್ಲಿ ಈಗಾಗಲೇ 26 ಸಾರ್ವಜನಿಕ ಬ್ಯಾಂಕುಗಳಿವೆ. 22 ಖಾಸಗಿ ಬ್ಯಾಂಕುಗಳು ಮತ್ತು 56 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಇವೆ. ಈ ಹಿಂದೆ, ಉದಾರೀಕರಣದ ಬೀಸುಗಾಳಿಯಲ್ಲಿ 1993ರಲ್ಲಿ 10 ಬ್ಯಾಂಕುಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದವು. ಅದಾದನಂತರ ಯಾವುದೇ ಬ್ಯಾಂಕು ಹೊಸದಾಗಿ ಸೇವಾಕ್ಷೇತ್ರಕ್ಕೆ ಬಂದಿರಲಿಲ್ಲ.
ಈ ಮಧ್ಯೆ, 2004ರಲ್ಲಿ YES Bank ಮಾತ್ರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿತ್ತು.
ಆರ್ ಬಿಐನ ಹೊಸ ನೀತಿ ಬಗ್ಗೆ ಈ ಕಂಪನಿಗಳು ಸಹಜವಾಗಿಯೇ ಆಶಾಭಾವ ವ್ಯಕ್ತಪಡಿಸಿವೆ. ಈ ಕಂಪನಿಗಳ ಪೈಕಿ ಕೆಲವು ಹೊಸದಾಗಿ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಿದೆಯಾದರೂ ಅನೇಕವು ಈಗಿರುವ ವ್ಯವಸ್ಥೆಯನ್ನೇ ಬ್ಯಾಂಕಿಂಗ್ ವಹಿವಾಟಿಗೆ ಅನುವಾಗುವಂತೆ ಬದಲಾಯಿಸಿಕೊಳ್ಳಲು ಉತ್ಸುಕತೆ ತೋರಿವೆ.
ಬ್ಯಾಂಕ್ ಸ್ಥಾಪನೆ ಮಾಡಬೇಕೆಂದರೆ ಕನಿಷ್ಠ 500 ಕೋಟಿ ರೂ. ಬಂಡವಾಳ ಇರಬೇಕು. ಇನ್ನು ವಿದೇಶಿ ಸಂಸ್ಥೆಗಳು ಶೇ. 49ರಷ್ಟು ಪಾಲು ಹೊಂದಿರಲಷ್ಟೇ ಅವಕಾಶವಿದೆ. ಈ ಹೊಸ ಬ್ಯಾಂಕುಗಳ ಪೈಕಿ ಶೇ. 25ರಷ್ಟು ಶಾಖೆಗಳನ್ನು ಈಗಾಗಲೇ ಬ್ಯಾಂಕ್ ಶಾಖೆಗಳು ಇಲ್ಲದ ಗ್ರಾಮಾಂತರ ಭಾಗಗಳಲ್ಲಿ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಹೀಗೆ ಹಳ್ಳಿಗೊಂದು ಬ್ಯಾಂಕ್ ಬಂದರೆ ಗಾಂಧಿಜೀ ಅವರು ಹೇಳಿದಂತೆ ಗ್ರಾಮಗಳೂ ಅಭಿವೃದ್ಧಿಗೊಂಡು ದೇಶವೂ ಪ್ರಗತಿ ಹೊಂದಬಹುದು. (ಪಿಟಿಐ)












Click it and Unblock the Notifications