ಸರ್ಕಾರ ವಿಸರ್ಜನೆಗೆ ಬಿಜೆಪಿಯಿಂದಲೇ ಶಿಫಾರಸು

ಶನಿವಾರ ಬ್ಯಾಡಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಹಲವಾರು ಸಚಿವ, ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆಂಬ ಸುಳಿವು ಹೊಂದಿರುವ ಬಿಜೆಪಿ ನಾಯಕರು, ರಾಜ್ಯಪಾಲರು ಬಹುಮತ ಸಾಬೀತು ಪಡಿಸುವಂತೆ ಸೂಚಿಸುವ ಮುನ್ನವೆ ವಿಧಾನಸಭೆ ವಿಸರ್ಜಿಸಲು ಶಿಫಾರಸು ಮಾಡುವ ಸಿದ್ಧತೆ ನಡೆಸುತ್ತಿರುವ ಕುರಿತು ನಮಗೆ ಬಿಜೆಪಿಯ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ ಎಂದರು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರದ ಶಿಫಾರಸಿನಂತೆ ವಿಧಾನಸಭೆ ವಿಸರ್ಜನೆಗೆ ಒಪ್ಪಿಗೆ ಸೂಚಿಸಿದರೆ, ಸಾರ್ವತ್ರಿಕ ಚುನಾವಣೆ ನಡೆದು ನೂತನ ಸರಕಾರ ರಚನೆಯಾಗುವವರೆಗೆ ಉಸ್ತುವಾರಿ ಅಥವಾ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ದುರಾಲೋಚನೆಯನ್ನು ಜಗದೀಶ್ ಶೆಟ್ಟರ್ ಹೊಂದಿದ್ದಾರೆ. ಬಹುಮತ ಸಾಬೀತುಪಡಿಸಲು ಆಗದೆ ಮುಖ ತಗ್ಗಿಸಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಈ ತಂತ್ರ ಮಾಡಿದ್ದಾರೆ ಎಂದು ಅವರು ದೂರಿದರು.
ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೇರಿ ದಂತೆ ಇನ್ನೂ ಹಲವು ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸುರೇಶ್‌ಗೌಡ ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಟೆಕ್ಕಿ ಕಣಕ್ಕೆ : ಸ್ಥಳೀಯ ಸಂಸ್ಥೆ ಚುನಾವಣೆ, ಮುಂಬರುವ ವಿಧಾನಸಭೆ ಚುನಾವಣೆ ಎರಡರಲ್ಲೂ ಕೆಜೆಪಿ ಯಾರ ಬೆಂಬಲ ಕೋರುವುದಿಲ್ಲ. 224 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸುರೇಶ್ ಗೌಡ ಪಾಟೀಲ್ ಹೇಳಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಗ್ರಾಮೀಣ ಅಭಿವೃದ್ಧಿ ಕನಸು ನನಸಾಗುವುದನ್ನು ಕಾಣಿರಿ ಎಂದರು.
ಸಾಫ್ಟ್ ವೇರ್ ಇಂಜಿನಿಯರ್ ಪದವೀಧರ ಪ್ರಸನ್ನ ಕುಮಾರ್ ಅವರು ಬಹುರಾಷ್ಟ್ರೀಯ ಕಂಪನಿಯ ಉದ್ಯೋಗವನ್ನು ತೊರೆದು ಕೆಜೆಪಿ ಸೇರಿದ್ದಾರೆ. ಮಾ.7 ರಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 30 ನೇ ವಾರ್ಡಿನ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಸಂತೋಷ. ಇನ್ನಷ್ಟು ವಿದ್ಯಾವಂತ ಯುವಕರು ಕೆಜೆಪಿ ಸೇರುವ ಉತ್ಸಾಹ ತೋರಿದ್ದಾರೆ ಎಂದು ಕೆಜೆಪಿ ಪ್ರಕಟಣೆ ಹೇಳಿದೆ.












Click it and Unblock the Notifications