ಬಿಜೆಪಿ ತೊರೆದ 'ರೆಬೆಲ್ ಸ್ಟಾರ್' ಶಂಕರಲಿಂಗೇಗೌಡ

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದ ಶಂಕರಲಿಂಗೇ ಗೌಡ ಅವರು, ವಿಧಾನಸೌಧದ ಸ್ಪೀಕರ್ ಕಚೇರಿಗೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ನೀಡಿದ ನಂತರ ಒನ್ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದರು.
"ಪ್ರಾಣ ಹೋದರು ಮಾನ ಮುಖ್ಯ ಎಂದು ಬದುಕುತ್ತಿರುವವರು ನಾವು. ಬಿಜೆಪಿಯ ಕೆಲವು ದುರ್ಮಾಗ ಪ್ರವರ್ತಕರಿಂದಾಗಿ ಪಕ್ಷದಲ್ಲಿ ಶಾಸಕರಿಗೆ ಬೆಲೆ ಇಲ್ಲವಾಗಿದೆ. ಆದ್ದರಿಂದ ಪಕ್ಷ ತೊರೆಯುತ್ತಿದ್ದೇನೆ" ಎಂದು ಚಾಮರಾಜ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೌಡರು ಆಕ್ರೋಶಭರಿತ ಮಾತುಗಳನ್ನಾಡಿದರು.
"ಜೆಡಿಎಸ್ ಸೇರುವುದಾಗಿ ಮೊದಲೇ ಘೋಷಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದಲೇ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಬರುತ್ತೇನೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇನೆ. ಜೆಡಿಎಸ್ ಸೇರುವುದು ಖಚಿತ" ಎಂದು ತಿಳಿಸಿದರು. ಗೌಡರ ರಾಜೀನಾಮೆಯಿಂದಾಗಿ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾದಂತಾಗಿದೆ.
ರಾಜುಗೌಡರಿಗೆ ಅರ್ಧಚಂದ್ರ? : ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ಸೇರಲು ಉತ್ಸುಕರಾಗಿರುವ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ತಿಳಿದುಬಂದಿದೆ.
ಆದ್ದರಿಂದ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ರಾಜುಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಅವರ ಆಪ್ತ ಮೂಲಗಳೂ ಹೇಳುತ್ತಿವೆ. ಸೋಮವಾರದ ನಂತರ ಟಿಕೆಟ್ ಸಿಗುವುದುಖಾತ್ರಿಯಾದರೆ ಮಾತ್ರ ಅವರು ರಾಜೀನಾಮೆ ನೀಡುವುದು ಖಚಿತವಾಗಿದೆ.
ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಆದರೆ, ಅವರಿಗೂ ಇನ್ನೂ ಟಿಕೆಟ್ ಸಿಗುವ ಭರವಸೆಯನ್ನು ಕೈ ನಾಯಕರು ನೀಡಿಲ್ಲ. ಬಿಜೆಪಿಯ ಸಚಿವರಾದ ಕಾರವಾರದ ಶಾಸಕ ಆನಂದ್ ಆಸ್ನೋಟಿಕರ್, ಪರಿಷತ್ ಸದಸ್ಯ ವಿ.ಸೋಮಣ್ಣ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದು, ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುತ್ತಿವೆ ಮೂಲಗಳು.












Click it and Unblock the Notifications