ಜಿಲ್ಲೆಗಳಲ್ಲೂ ಬಂದ್ ಬಿಸಿ ಸಂಚಾರದಲ್ಲಿ ವ್ಯತ್ಯಯ

ಉಡುಪಿಯಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಖಾಸಗಿ ಬಸ್ ಗಳು ಬೆಳಗ್ಗೆಯಿಂದಲೇ ಸಂಚಾರ ಸ್ಥಗಿತಗೊಳಿಸಿವೆ. ಉಡುಪಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜನಸಂಚಾರವೂ ವಿರಳವಾಗಿದ್ದು, ರಸ್ತೆಗಳು ಖಾಲಿಯಾಗಿವೆ.
ಬಳ್ಳಾರಿಗೂ ಬಂದ್ ಬಿಸಿ ತಟ್ಟಿದೆ. ಹೊರ ಊರುಗಳಿಂದ ಬೆಳಗ್ಗೆ ಬಳ್ಳಾರಿ ತಲುಪಿದ ಕೆಲವು ಕೆಎಸ್ಆರ್ ಟಿಸಿ ಬಸ್ ಗಳನ್ನು ಹೊರತು ಪಡಿಸಿದರೆ, ಯಾವುದೇ ಬಸ್ ಗಳು ಸಂಚಾರ ನಡೆಸುತ್ತಿಲ್ಲ. ಆಟೋ, ಖಾಸಗಿ ವಾಹನಗಳ ಸಂಚಾರವು ವಿರಳವಾಗಿದೆ. ತಾಳೂರು ರಸ್ತೆಯ ಹತ್ತಿರ ಕಿಡಿಗೇಡಿಗಳು ಎರಡು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಸಾರಿಗೆ ಬಸ್ ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದ್ದು, ಬಿಸಿಲಿನ ತಾಪ ಹೆಚ್ಚಿದಂತೆ ಬಂದ್ ಬಿಸಿಯೂ ಹೆಚ್ಚಾಗುವ ಸಾಧ್ಯತೆ ಇದೆ.
ಕೋಲಾರದಲ್ಲಿ ಬೆಳಗ್ಗೆ ರೈಲು ತಡೆದು ಪ್ರತಿಭಟನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಬಂದ್ ಬಿಸಿ ನಿಧಾನವಾಗಿ ಏರುತ್ತಿದ್ದು, ಬಸ್ ಮತ್ತು ಆಟೋಗಳ ಸಂಚಾರ ವಿರಳವಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಟನೆಗಳು ಬೆಳಗ್ಗೆ 10.30ರ ನಂತರ ಪ್ರತಿಭಟನೆ ನಡೆಸಲಿವೆ. ಆಟೋ ಚಾಲಕರ ಸಂಘ, ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ನೀರೀಕ್ಷೆ ಇದೆ.












Click it and Unblock the Notifications