ಈ ಕ್ಷೇತ್ರದಿಂದ ಈ ಬಾರಿ ಯಾವ ಪಕ್ಷ ಗೆಲ್ಲುತ್ತದೋ !?

ಸೀದಾ, ಬಳ್ಳಾರಿಯ ಹೂವಿನಹಡಗಲಿ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಮತದಾರರನ್ನು ಮಾತನಾಡಿಸಿ, ಈ ಬಾರಿ ಯಾವ ಪಕ್ಷವನ್ನು ಗೆಲ್ಲಿಸುತ್ತಾರೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲಿಗೆ ಅದೇ ಆಡಳಿತಾರೂಢ ಪಕ್ಷ ಎನಿಸಿಕೊಳ್ಳಲಿದೆ.
ಕ್ಷೇತ್ರ ಮಹಿಮೆ: ಹೌದು ಈ ಕ್ಷೇತ್ರದಿಂದ ಚುನಾಯಿತರಾದ ಶಾಸಕರು ಯಾವ ಪಕ್ಷವನ್ನು ಪ್ರತಿನಿಧಿಸಿರುತ್ತಾರೋ ಆ ಪಕ್ಷವೇ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ. ಇದು 1961ರಿಂದ ನಡೆದುಕೊಂಡು ಬಂದಿದೆ!
ಸತತ ನಾಲ್ಕನೆಯ ಬಾರಿಗೂ ಕಾಂಗ್ರೆಸ್: ಈ ಹಿಂದೆ ಹಡಗಲಿ-ಹರಪನಹಳ್ಳಿ ಕ್ಷೇತ್ರಕ್ಕೆ ಇಜಾರಿ ಶಿರಸಪ್ಪ, ಎಂ ಎಂ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಹೂವಿನ ಹಡಗಲಿ ಪ್ರತ್ಯೇಕ ಕ್ಷೇತ್ರವಾಗಿ ಮಾರ್ಪಟ್ಟಿತು. ಅಂದಿನಿಂದ ಅಂದರೆ 1961ರಿಂದ ಇಲ್ಲಿ ನೂತನ ಇತಿಹಾಸ ನಿರ್ಮಾಣವಾಗುತ್ತಿದೆ. ಅದು ಕಳೆದ ಚುನಾವಣೆವರೆಗೂ ನಡೆದುಕೊಂಡು ಬಂದಿದೆ. ಮುಂದಿನ ಚುನಾವಣೆ ಹೇಗೋ, ಏನೋ !?
1961 ರಲ್ಲಿ ಅಂಗಡಿ ಚನ್ನಬಸಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಜಯಶಾಲಿಯಾದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಿತು. 1968ರಲ್ಲಿ ಕಾಂಗ್ರೆಸ್ಸಿನಿಂದ ಎನ್ಎಂಕೆ ಸೋಗಿ ಆಯ್ಕೆಯಾದರು. ಆಗಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಅಂದಾನಪ್ಪ ಜಯಭೇರಿ ಬಾರಿಸಿದರು. repeat ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 1978ರಲ್ಲಿ ಕಾಂಗ್ರೆಸ್ಸಿನಿಂದ ಕೋಗಳಿ ಕರಿಬಸವನ ಗೌಡ ಗೆದ್ದುಬರುತ್ತಿದ್ದಂತೆ ಸತತವಾಗಿ ನಾಲ್ಕನೆಯ ಬಾರಿಗೂ ಕಾಂಗ್ರೆಸ್ ಅಧಿಕಾರ ಹಿಡಿಯಿತು.
ಮುಂದ!?: 1983ರಲ್ಲಿ ಜನತಾ ಪಕ್ಷದಿಂದ ಎಂಪಿ ಪ್ರಕಾಶ್ ಆಯ್ಕೆಯಾದಾಗ ಜನತಾ ಪಕ್ಷ ಸರಕಾರ ರಚಿಸಿತು. 1989ರಲ್ಲಿ ಕಾಂಗ್ರೆಸಿನಿಂದ ಈಟಿ ಶಂಭುನಾಥ ಪ್ರಕಾಶರನ್ನು ಗೆಲುವು ಸಾಧಿಸುವ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಮರಳಿತು. ಅದೇ 1994ರ ವೇಳೆಗೆ ಮತ್ತೆ ಎಂಪಿ ಪ್ರಕಾಶ್ ಅವರು ಜನತಾದಳದಿಂದ ಗೆಲ್ಲುತ್ತಿದ್ದಂತೆ ಜೆಡಿಎಸ್ ಅಧಿಕಾರಕ್ಕೆ ಬಂದಿತು.
1999ರಲ್ಲಿ ನಂದಿಹಳ್ಳಿ ಹಾಲಪ್ಪ ಅವರು ಕಾಂಗ್ರೆಸ್ಸಿನಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮತ್ತೆ ರಾಜ್ಯಾಡಳಿತಕ್ಕೆ ಮರಳಿತು. ಇನ್ನು 2004ರಲ್ಲಿ ಎಂಪಿ ಪ್ರಕಾಶ್ ಅವರು ಆಯ್ಕೆಯಾದಾಗ ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಿತು. ಇಂತಿಪ್ಪ ವಿಶಿಷ್ಟ ಕ್ಷೇತ್ರವು 2008ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಆಗ ಚಂದ್ರ ನಾಯ್ಕ ಅವರು ಬಿಜೆಪಿಯಿಂದ ಚುನಾಯಿತರಾದರು.
ಇತಿಹಾಸ ಪುನರಾವರ್ತನೆಯಾದರೆ...: 2013ರ ಚುನಾವಣೆಯಲ್ಲಿ ಯಾವ ಪಕ್ಷದ, ಯಾವ ಅಭ್ಯರ್ಥಿಗೆ ಇಲ್ಲಿನ ಮತದಾರ ಒಲಿಯುತ್ತಾನೋ ಎಂಬುದನ್ನು ಆಧರಿಸಿ ಮುಂದಿನ ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ದಕ್ಕುತ್ತದೆ ಎಂಬುದನ್ನು ಹೇಳಬಹುದು.












Click it and Unblock the Notifications