ನ್ಯಾ. ಭಾಸ್ಕರ್ ರಾವ್ ನೂತನ ಲೋಕಾಯುಕ್ತ

ನ್ಯಾ. ಭಾಸ್ಕರ್ ರಾವ್ (74) ಅವರು ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಸೋದರ ಸಂಬಂಧಿ. ಆಗಸ್ಟ್ 2, 2011ರಂದು ನ್ಯಾ. ಸಂತೋಷ್ ಹೆಗ್ಡೆ ಅವರು ನಿವೃತ್ತಿಯಾದ ನಂತರ ಕರ್ನಾಟಕ ಲೋಕಾಯುಕ್ತ ಸ್ಥಾನ ಬಹುತೇಕ ಖಾಲಿಬಿದ್ದಿತ್ತು.
ಲೋಕಾಯುಕ್ತ ಕಾಯ್ದೆಯ ಪ್ರಕಾರ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ ರಾವ್, ಸ್ಪೀಕರ್ ಕೆಜಿ ಬೋಪಯ್ಯ, ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ, ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಪರಿಷತ್ ವಿರೋಧ ಪಕ್ಷದ ನಾಯಕ ಎಸ್ಆರ್ ಪಾಟೀಲ್ ಹೀಗೆ ಸರ್ವಸಮ್ಮತವಾಗಿ ನ್ಯಾ. ಭಾಸ್ಕರ್ ರಾವ್ ಅವರ ನೇಮಕಕ್ಕೆ ಅಸ್ತು ಎಂದಿದ್ದಾರೆ.
ನ್ಯಾ. ಭಾಸ್ಕರ್ ರಾವ್ ಅವರು 1999ರ ಜನವರಿ 17ರಿಂದ ಮಾರ್ಚ್ 9ರವರೆಗೆ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು. 1999ರ ಮಾ. 9 ರಿಂದ 2000ನೇ ಜೂನ್ 26ರವರೆಗೆ ಕಾಯಂ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. 2000ರ ಜೂ. 26 ರಂದು ನಿವೃತ್ತರಾಗಿದ್ದರು.
ಈ ಮಧ್ಯೆ, ಆಂಧ್ರದ ಕರೀಂನಗರದವರಾದ ನ್ಯಾ. ಭಾಸ್ಕರ್ ರಾವ್ (74) ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವುದಕ್ಕೆ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಭಾಸ್ಕರ್ ರಾವ್ ಅವರು ಬಿಡಿಎ ನಿವೇಶನ ಪಡೆದುಕೊಂಡಿದ್ದಾರೆ. ಅವರಿಗೆ ಕನ್ನಡ ಬರುವುದಿಲ್ಲ. ಅವರಿಗೆ ವಯಸ್ಸಾಗಿದೆ.
ಪ್ರಸ್ತುತ, ರಾಜ್ಯ ಹೈಕೋರ್ಟಿನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ನ್ಯಾಯಮೂರ್ತಿ ನೇಮಕವಾಗುವವರೆಗೂ ನೂತನ ಲೋಕಾಯುಕ್ತ ನೇಮಕಾತಿಗೆ ಕಾಯಬೇಕಿತ್ತು ಎಂದು ನ್ಯಾ. ಭಾಸ್ಕರ್ ರಾವ್ ಅವರ ನೇಮಕಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಅವರು ತಮ್ಮ ಆಕ್ಷೇಪ ಮಂಡಿಸಿದ್ದಾರೆ.












Click it and Unblock the Notifications