ಜೆಡಿಎಸ್ ಸದಸ್ಯ ಗಿರೀಶ್ ಕೊಲೆಗಾರ್ತಿ ಬಂಧನ

ಕೋಡಿಕಲ್ ನ 28 ವರ್ಷ ವಯಸ್ಸಿನ ನತಾಶ ಎಂಬ ಯುವತಿ ಜೊತೆಗೆ ಪ್ರಕರಣದ ಪ್ರಮುಖ ಆರೋಪಿಗಳಾದ ರಿತೇಶ್ ಹಾಗೂ ಇತರ ಮೂರು ಮಂದಿ ಇದ್ದಾರೆ. ಆದರೆ, ಇತರೆ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಜ್ಪೆ ಪೊಲೀಸರು ಹೇಳಿದ್ದಾರೆ.
ಬಂಧಿತ ಯುವತಿಗೆ ಮದುವೆ ನಿಶ್ಚಿತಾರ್ಥ ನಡೆದಿದ್ದರೂ, ಗಿರೀಶ್ ಪುತ್ರನ್ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದಕ್ಕೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಯೋಜನೆ ರೂಪಿಸಿದ ಯುವತಿ, ತನ್ನ ಭಾವಿ ಪತಿ ಮತ್ತು ಇತರ ಮೂವರ ಜತೆ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.21ರಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದ ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ ಗಿರೀಶ್ ಪುತ್ರನ್(50) ನಾಪತ್ತೆಯಾಗಿ ಪೆರ್ಮುದೆ-ಬೆಳ್ಳುಳ್ಳಿಮಾರ್ ಮುರ್ಕೋಡಿಯಲ್ಲಿ ಚೂರಿಯಿಂದ ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಕೊಲೆಗೆ ಯುವತಿಗೆ ಕಿರುಕುಳ ಹಾಗೂ ಗಿರೀಶ್ ಬಳಿ ಇದ್ದ ಚಿನ್ನಾಭರಣ ಕಾರಣವಾಯಿತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಗಿರೀಶ್ ಪುತ್ರನ್ ಅವರನ್ನು ಜಾಗದ ವ್ಯವಹಾರದ ಸಂಬಂಧ ಮಾತನಾಡಲಿಕ್ಕಿದೆ ಎಂದು ನಂಬಿಸಿ ಆರೋಪಿಗಳು ಯುವತಿ ನತಾಶ ಮೂಲಕ ಕರೆಸಿದ್ದರು. ನಿಜವೆಂದು ನಂಬಿದ ಗಿರೀಶ್ ಯುವತಿಯ ಜತೆ ಹೋದ ನಂತರ ಇತರ ನಾಲ್ವರು ಆರೋಪಿಗಳು ಅವರನ್ನು ಸೇರಿಕೊಂಡಿದ್ದರು. ಪೂರ್ವ ನಿಯೋಜಿತ ಸಂಚಿನಂತೆ ಬಳಿಕ ಗಿರೀಶ್ ರನ್ನು ಇರಿದು ಕೊಲೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಸಮಯದಲ್ಲಿ ಗಿರೀಶ್ ಬಳಿ 1.5 ಲಕ್ಷ ರು ಚಿನ್ನ ಹಾಗೂ 70,000 ನಗದು ಹಣ ಇತ್ತು ಎನ್ನಲಾಗಿದೆ. ಕೊಲೆಯಾದ ನಂತರ ಚಿನ್ನಾಭರಣ, ನಗದು ಕೂಡಾ ಮಾಯವಾಗಿದೆ. ಗಿರೀಶ್ ಬಳಿ ಇದ್ದ ಹಣವನ್ನು ದೋಚಲು ನತಾಶ ಆತನಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರವಾಗ ತೊಡಗಿದ್ದಳು. ಇದನ್ನು ನಿಜ ಎಂದು ನಂಬಿದ್ದ ಗಿರೀಶ್ ಆಕೆಯನ್ನು ಕರೆಸಿಕೊಂಡು ತನ್ನ ಸಾವಿಗೆ ಮುನ್ನುಡಿ ಬರೆದುಬಿಟ್ಟ ಎಂದು ತಿಳಿದು ಬಂದಿದೆ.












Click it and Unblock the Notifications