ಮುಖ್ಯಮಂತ್ರಿ ಮಹದಾಸೆಯ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ!
ಬೆಂಗಳೂರು, ಫೆ.4: ವಿಧಾನಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸ್ಥಾನದ ಮಹತ್ವಾಕಾಂಕ್ಷಿ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವೇ? ಎಂದು ಕೇಳಿದರೆ ಅವರ ಅಭಿಮಾನಿ ದೇವರುಗಳು ಸಿಟ್ಟಿಗೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆದರೆ ವಾಸ್ತವದಲ್ಲಿ ಸಿದ್ದರಾಮಯ್ಯನವರು ವಿಧಾನಸಭೆ ಚುನಾವಣೆ ಕಣಕ್ಕಿಳಿಯುವ ಲಕ್ಷಣಗಳು ಯಾವುವೂ ಇದುವರೆಗೂ ಕಂಡುಬಂದಿಲ್ಲ. ಟಿಕೆಟ್ ವಿತರಣೆ ಸಂಬಂಧ ರಾಜ್ಯ ಕಾಂಗ್ರೆಸ್ ಕಳೆದ ತಿಂಗಳೇ ಅಂಗಡಿ ಮುಚ್ಚಿದೆ. ಜ. 31ರವರೆಗೂ ಟಿಕೆಟಿಗಾಗಿ ಅರ್ಜಿ ಹಂಚುತ್ತಿದ್ದ ಕೆಪಿಸಿಸಿ ಎಲಕ್ಷನ್ ಟಿಕೆಟ್ ಹಂಚಿಕೆ ಹೆಸರಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತಾದರೂ ಯಾಕೋ ಸಿದ್ದರಾಮಯ್ಯನವರು ಟಿಕೆಟ್ ಹಾಗಿರಲಿ, ಅರ್ಜಿಗಾಗಿಯೇ ಆ ಕಡೆಗೆ ಹೆಜ್ಜೆ ಹಾಕಿಲ್ಲ.
ಗಮನಾರ್ಹವೆಂದರೆ ಸ್ವತಃ ಕೆಪಿಸಿಸಿ ಅಧಿನಾಯಕ ಡಾ. ಪರಮೇಶ್ವರ್ ಅವರೇ ಶಿಸ್ತಾಗಿ ಹೋಗಿ ಟಿಕೆಟ್ ತೆಗೆದುಕೊಂಡುಬಂದಿದ್ದಾರೆ. ಆದರೂ ಯಾಕೋ ಸಿದ್ದರಾಮಯ್ಯನವರು...?

ಕಾಂಗ್ರೆಸ್ ಟಿಕೆಟ್ ಗಾಗಿ ಕ್ಯೂ ನಿಲ್ಲೊಲ್ಲ
ಸಿದ್ದರಾಮಯ್ಯನವರ ಕಾಲೆಳೆಯುವವರ ಪ್ರಕಾರ ತಾವೇ ಖುದ್ದಾಗಿ ಸಾಲಿನಲ್ಲಿ ನಿಂತು ಟಿಕೆಟ್ ಬೇಡುವುದು ಸಿದ್ದು ಜಾಯಮಾನಕ್ಕೆ ಒಗ್ಗುವಂತಹುದಲ್ಲವಂತೆ. ಹೇಗೂ ಟಿಕೆಟ್ ಕಾತರಿ ಇರುವುದರಿಂದ ಸುಮ್ಮಸುಮ್ಮನೆ 10 ಸಾವಿರ ರೂ. ಯಾಕಪ್ಪಾ ಖಾಲಿ ಮಾಡ್ಕೋಬೇಕು ಎಂಬುದು ಸಿದ್ದು ಲೆಕ್ಕಾಚಾರವಾಗಿರಬಹುದು ಎಂದೂ ವ್ಯಂಗ್ಯವಾಡುವವರಿದ್ದಾರೆ.

ಯಡಿಯೂರಪ್ಪ- ಕಾಪು ಸಿದ್ಲಿಂಗು ಭಯವಂತೆ
ಸಿದ್ದುಗೆ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ಅವರ ಬಂಟ ಕಾಪು ಸಿದ್ದಲಿಂಗ ಸ್ವಾಮಿಯ ಭಯವಂತೆ. ಆದರೆ ಬದ್ಧತೆಯಿಲ್ಲದ ಸಿದ್ದಲಿಂಗ ಸ್ವಾಮಿಯಂತಹವರ ವಿರುದ್ಧ ಸ್ಪರ್ಧಿಸುವುದು ತಮ್ಮ ಘನತೆಗೆ ಕುಂದು ಎಂದು ಬಗೆದಿರುವ ಸಿದ್ದು ಈ ಬಾರಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. 4 ವರ್ಷಗಳಿಂದ ಸಿದ್ದಲಿಂಗ ಸ್ವಾಮಿ ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಿದ್ದು, ಮತದಾರರನ್ನು ಭದ್ರಪಡಿಸಿಕೊಂಡಿದ್ದಾರಂತೆ. ಇನ್ನು, ವರುಣಾದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಸಿದ್ದು ವಿರುದ್ಧ ಕೆಲಸ ಮಾಡುವ ಸಾಧ್ಯತೆಯೂ ಇದೆಯಂತೆ. ಸಿದ್ದುಗೆ ಜೆಡಿಎಸ್ ಅಡ್ಡಗಾಲು ಹಾಕುವುದು ನಿಶ್ಚಿತ ಎನ್ನಲಾಗಿದೆ.

ಪುತ್ರ ರಾಕೇಶ್ ಸಿದ್ದರಾಮಯ್ಯಗೆ ಟಿಕೆಟ್?
ಆದರೆ ಕುರುಬ ಸಮುದಾಯದ ಅಗ್ರ ನಾಯಕ ಸಿದ್ದರಾಮಯ್ಯನವರು ತಮ್ಮ ಪುತ್ರ ರಾಕೇಶ್ ಅವರನ್ನು ವರುಣಾ ಕ್ಷೇತ್ರದಲ್ಲಿ ಕಣಕ್ಕೆ ಬಿಟ್ಟು, ತಾವು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರಂತೆ. 32 ವರ್ಷದ ರಾಕೇಶ್, ಸಿದ್ದರಾಮಯ್ಯನವರ ಹಿರಿಯ ಪುತ್ರ, ಬಿಎ ಪದವೀಧರ. ರಾಕೇಶ್, ಹೀರೋ ಆಗಿಯೂ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ.

ರಾಣೆಬೆನ್ನೂರೋ, ಚಾಮುಂಡೇಶ್ವರಿ ಕೃಪೆಯೋ?
ಹಾಗಾಗಿ ಸಿದ್ದು ರಾಣೆಬೆನ್ನೂರು ಕ್ಷೇತ್ರದ ಮೇಲೆ ಕಣ್ಣುಹಾಕಿದ್ದಾರಂತೆ. ಇನ್ನು, ಚಾಮುಂಡೇಶ್ವರಿ ಕೃಪೆಗೆ ಪಾತ್ರರಾಗಲು ಆ ಕ್ಷೇತ್ರದಿಂದಲೂ ಸ್ಪರ್ಧಿಸುವ ಕಸರತ್ತು ನಡೆದಿದೆಯಂತೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳು ಎರಡೂ ಮೂರೂ ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಸಂಪ್ರದಾಯವಿಲ್ಲವಂತೆ. ಸೋ, ನೋಡಬೇಕು ಸಿದ್ದು ಏನ್ಮಾಡ್ತಾರೋ!?












Click it and Unblock the Notifications