ನಾನು ಯಾವ ಪಕ್ಷದಲ್ಲಿರುತ್ತೇನೋ ಅದೇ ಪಕ್ಷ ಅಧಿಕಾರಕ್ಕೆ

ಒಂದಂತೂ ಸತ್ಯ, ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಅದೇ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜವಳಿ ಖಾತೆ ಸಚಿವ ವರ್ತೂರು ಪ್ರಕಾಶ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವರ್ತೂರು, ರಾಜ್ಯದಲ್ಲಿ ಜಾತಿ ರಾಜಕಾರಣಕ್ಕೆ ಯಡಿಯೂರಪ್ಪ ಪ್ರಮುಖ ಕಾರಣ. ಲಿಂಗಾಯಿತರ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಅವರು ಹೊಸ ಪಕ್ಷ ಸ್ಥಾಪಿಸಿದರು.
ಆದರೆ ಅವರನ್ನು ಲಿಂಗಾಯಿತರು ಬೆಂಬಲಿಸುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೂ ಸರಕಾರ ಉರುಳುವುದು ಬೇಕಾಗಿಲ್ಲ, ಸರಕಾರ ಉರುಳಿಸುವ ಕೆಲಸಕ್ಕೆ ಯಡಿಯೂರಪ್ಪ ಮುಂದಾಗಿರುವುದು ನೋವು ತಂದಿದೆ ಎಂದು ವರ್ತೂರು ಪ್ರಕಾಶ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳಾದ ನಾವು ಜನಸೇವೆಗೆ ನಮ್ಮ ಜೀವನವನ್ನು ಮುಡಿಪಾಗಿಡಬೇಕು. ಯಾವ ಪಕ್ಷ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಲು ಮುಂದಾಗುತ್ತೋ ಆ ಪಕ್ಷಕ್ಕೆ ನಾನು ಸೇರುತ್ತೇನೆ.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕಳಂಕರಹಿತ ರಾಜಕಾರಿಣಿ, ಅವರು ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕೆನ್ನುವುದು ನನ್ನ ಬಯಕೆ ಎಂದು ವರ್ತೂರು ಪ್ರಕಾಶ್ ಹೇಳುವ ಮೂಲಕ ತನ್ನ ಮುಂದಿನ ನಡಿಗೆ ಕಾಂಗ್ರೆಸ್ ಕಡೆಗೆ ಇರಬಹುದೇನೋ ಎನ್ನುವ ಸೂಚನೆ ನೀಡಿದರು.
ಕುಮಾರಸ್ವಾಮಿ ನನ್ನ ಮೇಲೆ ಏನೆಲ್ಲಾ ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡುವ ಗೋಜಿಗೆ ನಾನು ಹೋಗುವುದಿಲ್ಲ. ಅವರ ಆರೋಪಕ್ಕೆ ಈಗಾಗಲೇ ಕೋಲಾರಮ್ಮನ ಮೇಲೆ ಆಣೆ ಮಾಡಿ ಪ್ರಮಾಣ ಮಾಡಿದ್ದೇನೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.
ವರ್ತೂರು ಪ್ರಕಾಶಿಗೆ ಜೆಡಿಎಸ್ 50 ಲಕ್ಷ ರೂಪಾಯಿ ನೀಡಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವರ್ತೂರು, 'ಭಿಕ್ಷುಕರಿಗೆ ಐದು ಪೈಸೆ ಹಾಕದ ಕುಟುಂಬವದು. ಇನ್ನು ನನಗೆ ಐವತ್ತು ಲಕ್ಷ ಕೊಟ್ಟಿದ್ದು ಅಂದರೆ ಅದು ಹಾಸ್ಯಾಸ್ಪದ ಹೇಳಿಕೆ. ಈ ಕ್ಷೇತ್ರದ ಅಧಿದೇವತೆ ಕೋಲಾರಮ್ಮನ ಮೇಲೆ ಆಣೆ ನಾನು ಅವರಿಂದ ಐದು ಪೈಸೆ ಮುಟ್ಟಿಲ್ಲ' ಎಂದು ವರ್ತೂರು ಪ್ರಕಾಶ್ ಪ್ರಮಾಣ ಮಾಡಿದ್ದರು.












Click it and Unblock the Notifications