ರಾಜಕಾರಣಿಗಳು ಬಳಸಿದ ಕೀಳು ಮಟ್ಟದ ಪದಗಳು
ಅವಾಚ್ಯ ಶಬ್ದ ಪ್ರಯೋಗ, ಏಕವಚನದಲ್ಲಿ ವಿರೋಧಿಗಳನ್ನು ತರಾಟೆಗೆ ತೆಗೆದು ಕೊಳ್ಳುವುದು ರಾಜಕಾರಣದಲ್ಲಿ ಸಾಮಾನ್ಯ. ಮಾತನಾಡುವ ಅಬ್ಬರದಲ್ಲಿ ಇವರು ಎಷ್ಟು ಕೆಳ ಮಟ್ಟದ ಭಾಷೆಗಳನ್ನು ಬಳಸುತ್ತಾರೆಂದರೆ ಇವರೆಲ್ಲಾ ನಮ್ಮ ನಾಯಕರುಗಳಾ? ಅನಿಸುತ್ತದೆ. ಮಾತಿನ ಭರಾಟೆಯಲ್ಲಿ ನಮ್ಮ ಟಾಪ್ ಕ್ಲಾಸ್ ನಾಯಕ ಶಿಖಾಮಣಿಗಳು ಆಡಿದ 15 ಆಣಿಮುತ್ತುಗಳು ಇಲ್ಲಿವೆ.
ಆಡಳಿತ ಪಕ್ಷ ಪ್ರತಿಪಕ್ಷಗಳನ್ನು ಮತ್ತು ಪ್ರತಿಪಕ್ಷಗಳು ಆಡಳಿತ ಪಕ್ಷಗಳನ್ನು ಒಂದಲ್ಲಾ ಒಂದು ಕಾರಣಕ್ಕೆ ತರಾಟೆಗೆ ತೆಗೆದುಕೊಳ್ಳುವುದು/ಸಮರ್ಥಿಸಿಕೊಳ್ಳುವುದು ರಾಜಕೀಯದಲ್ಲಿ ಇರಬೇಕಾಗಿದ್ದೆ. ಆದರೆ ಅದು ಎಲ್ಲೆ ಮೀರಿದರೆ ರಾಜಕಾರಿಣಿಗಳ ಮೇಲೆ ಸಾರ್ವಜನಿಕರಿಗೆ ಇರುವ ಚಿಕ್ಕಾಸು ಮರ್ಯಾದೆ ಇಲ್ಲದಂತಾಗುತ್ತದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಎಂತೆಂಥಾ ಹೇಳಿಕೆಗಳಿಗೆ/ ಘಟನೆಗಳಿಗೆ ಕರ್ನಾಟಕದ ಜನತೆಯ ಸಾಕ್ಷಿಯಾಗಬೇಕಾಯಿತು. ಅದು ಅಸೆಂಬ್ಲಿಯಲ್ಲಿ ಸೆಕ್ಸ್ ವಿಡಿಯೋ ವೀಕ್ಷಣೆಯಿಂದ ಹಿಡಿದು ಪಕ್ಷೇತರ ಅಭ್ಯರ್ಥಿ ಬಟ್ಟೆಬರೆ ಹರಿದುಕೊಂಡು ಕೂಗಾಡುವಷ್ಟು.
ರಾಜಕಾರಿಣಿಗಳು ತಮ್ಮ ಪದ ಬಳಕೆಯಲ್ಲಿ ಹಿಡಿತ ಕಳೆದುಕೊಂಡರೆ ಮುಂದೊಂದು ದಿನ ಸಾರ್ವಜನಿಕರಿಗೆ ರಾಜಕಾರಿಣಿಗಳ ಮೇಲೆ ವಾಕರಿಕೆ ಬರುವುದು ಖಂಡಿತ. ಯಡಿಯೂರಪ್ಪ ಬೋಸುಡಿ ಮಗ, ಖೇಣಿ ತಲೆ ಹಿಡುಕ ಹೀಗೆ ನಮ್ಮ ಘನ ರಾಜಕಾರಿಣಿಗಳು ತಮ್ಮ ವಿರೋಧಿಗಳ ವಿರುದ್ದ ಬಳಸಿದ ಅವಾಚ್ಯ / ಕೀಳು ಮಟ್ಟದ ಪದಪುಂಜಗಳು ಫೋಟೋ ಸ್ಲೈಡಿನಲ್ಲಿ ಓದಿ (ಆವರಣದಲ್ಲಿ ಹೇಳಿಕೆ ನೀಡಿದ ದಿನಾಂಕ ನಮೂದಿಸಲಾಗಿದೆ)

ಯಡಿಯೂರಪ್ಪ ಬ್ಲಡಿ ಬಾಸ್ಟರ್ಡ್ (11.01.2010)
ಯಡಿಯೂರಪ್ಪ ಒಬ್ಬ ಅಯೋಗ್ಯ. 'ಹಿ ಇಸ್ ಎ ಬ್ಲಡಿ ಬಾಸ್ಟರ್ಡ್, ಬೋಸುಡಿ ಮಗ' ಎಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತರಾಟೆಗೆ ತೆಗೆದುಕೊಂಡಿದ್ದರು. ಮಾಜಿ ಪ್ರಧಾನಿಯೊಬ್ಬರು ಬಳಸಿದ ಈ ಪದ ರಾಷ್ಟ್ರ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಯಿತು. ಅದಾದ ನಂತರ ದೊಡ್ಡ ಗೌಡ್ರು ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದು ಬಿಎಸ್ವೈ ಕ್ಷಮೆ ಯಾಚಿಸಿದ್ದರು.

ಖೇಣಿ ಒಬ್ಬ ತಲೆಹಿಡುಕ (05.01.2009)
ರೈತರ ಕಣ್ಣೀರು ಅವನನ್ನು ಸುಮ್ಮನೆ ಬಿಡುವುದಿಲ್ಲ. ಅಮಾಯಕರ ಭೂಮಿಯನ್ನು ಕಬಳಿಸುವ ನೈಸ್ ಸಂಸ್ಥೆಯ ಒಡೆಯ ಅಶೋಕ್ ಖೇಣಿ ಒಬ್ಬ ತಲೆಹಿಡುಕ ಎಂದು ಮಾಜಿ ಪ್ರಧಾನಿ ದೇವೇಗೌಡ ಜರಿದಿದ್ದರು.

ಶೆಟ್ಟರ್ ಗೆ ಕ್ಯಾನ್ಸರ್, ಏಡ್ಸ್ ಬಂದಿದೆ (08.01.2013)
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಬಹಿರಂಗ ಸಭೆಯಲ್ಲಿ ಶೆಟ್ಟರ್ ಗೆ ಕ್ಯಾನ್ಸರ್, ಏಡ್ಸ್ ತಗುಲಿದೆ. ಸರ್ಕಾರ ನಶಿಸಲಿದೆ ಎಂದು ಅಸಂವಿಧಾನಿಕ ಪದ ಬಳಸಿದ್ದರು.

ಯಡ್ಡಿ ಸ್ವಲ್ಪ ಪುರುಷತ್ವ ಬೆಳೆಸಿಕೊಳ್ಳಿ (26.07.2010)
ಮಾನ್ಯ ಮುಖ್ಯಮಂತ್ರಿಗಳೇ, ಸಿದ್ದಗಂಗಾ ಮಠಕ್ಕೆ ಹೋಗಿ ಸ್ನಾನ ಮಾಡಿ ಪಾಪ ತೊಳ್ಕೋಳ್ಳಿ, ಹಾಗೇ ಸ್ವಲ್ಪ ಪುರುಷತ್ವವನ್ನೂ ಪಡ್ಕೊಂಡು ಬನ್ನಿ ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು.

ಬ್ಲಡಿ ಬಾಸ್ಟರ್ಡ್ ಅಡ್ವೋಕೇಟ್ ಜನರಲ್ (04.02.2010)
ಈ ಗೌಡ ಎಲ್ಲದಕ್ಕೂ ಅಡ್ಡ ಬರ್ತಾನೆ, ಬಡ್ಡೀಮಗ ಹೋದರೆ ಸಾಕು ಎಂದು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಆದರೆ ನಾನು ಹೋಗ್ತೀನಾ? ಅವನೊಬ್ಬ 'ಬ್ಲಡಿ ಬಾಸ್ಟರ್ಡ್ ಅಡ್ವೋಕೇಟ್ ಜನರಲ್' ಎಂದು ದೇವೇಗೌಡ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ವಿರುದ್ದ ಹರಿಹಾಯ್ದಿದ್ದರು.

ಬಿಜೆಪಿಯವರು ರೇಪಿಸ್ಟುಗಳು, ಹೆಣ್ಣು ಮಕ್ಕಳೇ ಹುಷಾರ್ (26.11.2012)
ಭಾರತೀಯ ಜನತಾ ಪಕ್ಷದಲ್ಲಿರುವವರು ರೇಪಿಸ್ಟುಗಳು, ಅವರನ್ನು ಯಾರೂ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಮುಖ್ಯವಾಗಿ ಹೆಣ್ಣು ಮಕ್ಕಳು ಬಿಜೆಪಿ ನಾಯಕರುಗಳ ಜೊತೆ ಹುಷಾರಾಗಿರಬೇಕೆಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯಭರಿತ ದಾಟಿಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪೂಜಾ ಗಾಂಧಿ ಪೂಜೆಗೆ ಯಡಿಯೂರಪ್ಪ (18.12.2012)
ಪೂಜಾ ಗಾಂಧಿ ಯಡಿಯೂರಪ್ಪಗೆ ಪೂಜೆ ಮಾಡಲು ಹೋಗಿರಬಹುದು ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದರು.

ಬಿಎಸ್ವೈ ಅಪ್ಪ ಬಂದ್ರೂ ನನ್ನನೇನೂ ಮಾಡಲಾಗದು (18.11.2012)
ಯಡಿಯೂರಪ್ಪನವರೇ, ನಿಮಗೊಂದು ಮಾತು ಹೇಳಲು ಬಯಸುತ್ತೇನೆ. ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಿದ್ದೀರಿ, ಇನ್ನೂ ಮಾಡುತ್ತಲೇ ಇದ್ದೀರಿ. ನೀವಲ್ಲಾ, ನಿಮ್ಮ ಅಪ್ಪ ಬಂದರೂ ನನ್ನನ್ನು ಮತ್ತು ದೇವೇಗೌಡ ಕುಟುಂಬವನ್ನು ಏನೂ ಮಾಡಲು ನೀವು ಅಶಕ್ತರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗುಡುಗಿದ್ದರು.

ಚಂದ್ರಮನಿಗೆ ಚಕೋರಿ, ಬಿಎಸ್ವೈಗೆ ಶೋಭಕ್ಕ
ಚಂದ್ರಮನಿಗೆ ಚಕೋರಿ ಚಿಂತೆಯಾದರೆ ನಮ್ಮ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರಿಗೆ ಶೋಭಾ ಕರಂದ್ಲಾಜೆ ಚಿಂತೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಬೇರೆಯೇ ಅರ್ಥಬರುವಂತೆ ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಪಾದಯಾತ್ರೆಯ ಸಮಯದಲ್ಲಿ ವ್ಯಂಗ್ಯವಾಡಿದ್ದರು.

ಪೂಜಾ ಗಾಂಧಿ ದಂಡು ಪಾಳ್ಯದ ಕ್ವೀನ್ (18.12.2012)
ನಟಿ ಪೂಜಾ ಗಾಂಧಿ ದಂಡುಪಾಳ್ಯದ ಕ್ವೀನ್, ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕುಮಾರಸ್ವಾಮಿಯ ಕಾಲೆಳೆದಿದ್ದರು.

ಅನಂತಕುಮಾರ್ ಬ್ರಾಹ್ಮಣನೆ ? (27.04.2009)
ಅನಂತಕುಮಾರ್ ನಿಜವಾದ ಬ್ರಾಹ್ಮಣನೆ ? ಆರತಿ ತಟ್ಟೆಗೆ ಕಾಣಿಕೆ ಹಾಕುವ ಹಣ, ಅಕ್ರಮ ಹಣ ಹಂಚಿಕೆಯೆಂದು ನಂಬುವುದಾದರೆ ಚುನಾವಣಾ ಆಯೋಗವೇ ತನಿಖೆ ನಡೆಸಿ ಕ್ರಮಕೈಗೊಳ್ಳಲಿ ಎಂದು ದೇವೇಗೌಡ ಅವರು ಸವಾಲು ಹಾಕಿದ್ದರು.

ಕುಮಾರಸ್ವಾಮಿ ಒಬ್ಬ ಕಾಡು ಮನುಷ್ಯ (25.11.2012)
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಒಬ್ಬ 'ಕಾಡು ಮನುಷ್ಯ' ಎಂದು ಕರ್ನಾಟಕ ಜನತಾ ಪಕ್ಷದ ವಿ ಧನಂಜಯ ಕುಮಾರ್ ಆರೋಪಿಸಿದ್ದರು.

ಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ (15.10.2009)
RSS ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ ಎಂದು ಬಿಜೆಪಿ ಶಾಸಕ ಉನ್ನತ ಶಿಕ್ಷಣ ಸಚಿವ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಎಸ್ವೈಗೆ ಯಾವುದರಲ್ಲಿ ಹೊಡೆಯಬೇಕು (29.09.2009)
ಮೀತಿಮೀರಿದ ಸೃಜನ ಪಕ್ಷಪಾತ, ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗ ಜನರು ಯಾವುದರಲ್ಲಿ ಹೊಡಿಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದ್ದರು.

ರೆಡ್ಡಿ, ಯಡ್ಡಿ, ಚಡ್ಡಿ ಬಂಗಾರಪ್ಪ ಲೇವಡಿ (27.04.2009)
ಅವನೊಬ್ಬ ರೆಡ್ಡಿ, ಇವನೊಬ್ಬ ಯಡ್ಡಿ, ಅದೊಂದು ಚಡ್ಡಿ ಈ ಮೂವರಿಗೆ ನಿಮ್ಮ ಮತದ ಮೂಲಕ ಕಪಾಳಕ್ಕೆ ಬಿಗಿಯಿರಿ ಎಂದು ಜನಾರ್ದನರೆಡ್ಡಿ, ಯಡಿಯೂರಪ್ಪ ಹಾಗೂ RSS ಬಗ್ಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ಲೇವಡಿ ಮಾಡಿದ್ದರು.












Click it and Unblock the Notifications