ರಾಜೀನಾಮೆಗೆ ಸ್ಪೀಕರ್ ಬ್ರೇಕ್, ಗವರ್ನರ್ ರಂಗಪ್ರವೇಶ

ಬೋಪಯ್ಯ ಅನುಪಸ್ಥಿತಿ ಬಗ್ಗೆ ಯಡಿಯೂರಪ್ಪ ಈಗಾಗಲೇ ಕೆಂಡಕಾರಿದ್ದಾರೆ. ಆದರೂ ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿಗೆ ತೆರಳಿ 14 ಶಾಸಕರು ರಾಜೀನಾಮೆ ಸಲ್ಲಿಸುವುದು ಖಚಿತ ಎಂದು ಶಾಸಕ ಓಲೇಕಾರ್ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಯಡಿಯೂರಪ್ಪ ಅವರ ಪ್ರಯತ್ನಗಳು ನಿಷ್ಫಲವಾಗುವುದು ಬೇಡವೆಂದು ಪರೋಕ್ಷವಾಗಿ ರಂಗಪ್ರವೇಶಿದ್ದಾರೆ.
ಸ್ಪೀಕರ್ ಬೋಪಯ್ಯ ವಿದೇಶಕ್ಕೆ ತೆರಳಿರುವುದರಿಂದ ಯಡಿಯೂರಪ್ಪ ಬೆಂಬಲಿಗ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ತಡೆಯಾಗುತ್ತದೆ ಎಂದು ಭಾವಿಸಿದ ರಾಜ್ಯಪಾಲರು ಸ್ಪೀಕರ್ ಕಚೇರಿಗೆ ಬಿಸಿಮುಟ್ಟಿಸಿದ್ದಾರೆ.
ಸ್ಪೀಕರ್ ಬೋಪಯ್ಯ ಅನುಪಸ್ಥಿತಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ಶಾಸಕರ ರಾಜೀನಾಮೆ ಅಂಗೀಕರಿಸಬಹುದು ಎಂಬುದನ್ನು ಅರಿತ ಕಾನೂನು ಪಂಡಿತ ರಾಜ್ಯಪಾಲ ಭಾರದ್ವಾಜ್ ಅವರು ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಮಂಜುನಾಥ್ ಅವರಿಗೆ ಕರೆ ಮಾಡಿದ್ದಾರೆ.
ಆದರೆ ಅವರೂ ಸಹ ಈಗಾಗಲೇ ವಿದೇಶ (ವಿಧಾನಸಭೆ ಅರ್ಜಿಗಳ ಸಮಿತಿ ಜತೆ ಜಪಾನ್, ದ. ಕೊರಿಯಾ, ಥೈಲ್ಯಾಂಡ್) ಪ್ರವಾಸದಲ್ಲಿದ್ದಾರೆ. ನಗರಕ್ಕೆ ವಾಪಸಾಗುವುದು ಜ. 24ರಂದು. ಅಲ್ಲಿಯವರೆಗೆ ರಾಜೀನಾಮೆ ಪತ್ರಗಳು ಸ್ಪೀಕರ್ ಕಚೇರಿಯಲ್ಲಿ ಧೂಳು ತಿನ್ನುತ್ತಾ ಬಿದ್ದಿರುತ್ತದೆ ಎಂಬುದನ್ನು ಅರಿತ ರಾಜ್ಯಪಾಲರು
'ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರಂದು ನಡೆಯಲಿದೆ. ಬಜೆಟ್ ಅಧಿವೇಶನದ ಬಗ್ಗೆ ಮಾತನಾಡಬೇಕಿದೆ. ಆದ್ದರಿಂದ ತುರ್ತಾಗಿ ಬೆಂಗಳೂರಿಗೆ ವಾಪಸಾಗಿ' ಎಂದು ಕಾರ್ಯದರ್ಶಿಗಳಿಬ್ಬರಿಗೂ ರಾಜ್ಯಪಾಲರು ಸಂದೇಶ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಈ ಮಧ್ಯೆ, ರಾಜ್ಯ ಸರ್ಕಾರ ಫೆ. 8ರಂದು ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಅಲ್ಲಿಯವರೆಗೂ ಶತಾಯಗತಾಯ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ರಾಜಕೀಯ ತಂತ್ರಗಾರಿಕೆ ಹೆಣೆದಿದೆ. ಅದರಂತೆ ಬೋಪಯ್ಯ ಅವರನ್ನು ವಿದೇಶಕ್ಕೆ ಕಳಿಸಲಾಗಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟವಾಗಿ ತಿಳಿಸಿವೆ.
ಒಂದು ವೇಳೆ ಬಿಎಸ್‌ವೈ ಬೆಂಬಲಿಗ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರಕ್ಕೆ ಬೆಂಬಲ ವಾಪಸ್ ಪತ್ರ ಸಲ್ಲಿಸಿದರೆ 'ಅವರನ್ನೆಲ್ಲ ಅನರ್ಹಗೊಳಿಸುವ ಆಲೋಚನೆಯೂ' ಬಿಜೆಪಿ ಗಿದೆ. ಹಾಗಾಗಿ, ರಾಜ್ಯಪಾಲರಿಗೆ ಪತ್ರ ತಲುಪಿದ ತಕ್ಷಣ ಬೋಪಯ್ಯ ಬೆಂಗಳೂರಿಗೆ ಧಾವಿಸಿ ಬರುವ ಸಾಧ್ಯತೆಯಿದೆ.












Click it and Unblock the Notifications