ಫೆ.8ರಂದು ಜನತೆಗೆ ಕೇಕ್ ತಿನ್ನಿಸಲಿದ್ದಾರೆ ಶೆಟ್ಟರ್

Shettar to present state budget on 8th February
ಬೆಂಗಳೂರು, ಜ. 19 : ಎಲ್ಲ ವೈರುಧ್ಯಗಳ ನಡುವೆ ಫೆಬ್ರವರಿ 8ರಂದು 2013-14ನೇ ಸಾಲಿನ ಆಯವ್ಯಯ ಮಂಡಿಸಲು ರಾಜ್ಯ ಬಿಜೆಪಿ ಸರಕಾರ ಮಹತ್ವದ ನಿರ್ಧಾರವನ್ನು ಶನಿವಾರ ತೆಗೆದುಕೊಂಡಿದೆ. ಸಾಮಾನ್ಯವಾಗಿ ರೈಲು ಮತ್ತು ಕೇಂದ್ರ ಬಜೆಟ್ ಮಂಡನೆಯ ನಂತರ ರಾಜ್ಯ ಬಜೆಟ್ ಮಂಡಿಸುವುದು ಸಂಪ್ರದಾಯ. ಈಗ ಚುನಾವಣೆಯ ದೃಷ್ಟಿಯಿಂದ ಆ ಸಂಪ್ರದಾಯವನ್ನು ಮುರಿಯಲು ರಾಜ್ಯ ಸರಕಾರ ನಿರ್ಧರಿಸಿದೆ.

ಫೆ.4ರಿಂದ 13ನೇ ತಾರೀಖಿನವರೆಗೆ ಬಜೆಟ್ ಅಧಿವೇಶನ ನಡೆಸಲು, ಶನಿವಾರ ನಡೆಸಲಾದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಶೆಟ್ಟರ್ ಬಜೆಟ್ ಮಂಡಿಸಲು ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಹಿಂದಿನ ಬಜೆಟ್ ಮಂಡಿಸಿದ್ದ, ಬಿಜೆಪಿಯ ಕಡುವೈರಿ, ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಗುಡುಗಿದ್ದನ್ನು ಸ್ಮರಿಸಬಹುದು.

ಉಭಯ ಸದನಗಳ ಜಂಟಿ ಅಧಿವೇಶನ ಫೆ.4ರಂದು ಆರಂಭವಾಗಲಿದ್ದು, ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲು ಸಂಪುಟ ನಿಶ್ಚಯಿಸಿದೆ. ಬಜೆಟ್ ಮಂಡನೆಯ ನಂತರ ಫೆ.11ರಿಂದ ಬಜೆಟ್ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು.

ಅಡ್ಡಗಾಲು ಹಾಕುವರೆ ವಿರೋಧಿಗಳು : ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇರುವ ಸಂದರ್ಭದಲ್ಲಿ ವಿರೋಧ ಪಕ್ಷಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಮತದಾರರನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಸರಕಾರ ಜನಪ್ರಿಯ ಬಜೆಟ್ ಮಂಡಿಸಬಹುದು ಎಂಬ ಆತಂಕವೂ ಮನೆಮಾಡಿದ್ದು, ವಿರೋಧ ಪಕ್ಷಗಳು ಬಜೆಟ್ಟಿಗೆ ಅಡ್ಡಗಾಲು ಹಾಕಲು ತುದಿಗಾಲಲ್ಲಿ ನಿಂತಿವೆ.

ಜಗದೀಶ್ ಶೆಟ್ಟರ್ ಸರಕಾರ ಬಜೆಟ್ ಮಂಡಿಸದಂತೆ ತಡೆಯೊಡ್ಡಲು ಕರ್ನಾಟಕ ಜನತಾ ಪಕ್ಷದ ಕೂಡ ದಾಳವನ್ನು ಉರುಳಿಸುವ ಸಾಧ್ಯತೆಯಿದೆ. ಕೆಜೆಪಿ ಬೆಂಬಲಿತ ಅನೇಕ ಶಾಸಕರು ಇನ್ನೂ ಬಿಜೆಪಿಯಲ್ಲಿ ಇರುವುದರಿಂದ, ಶೆಟ್ಟರಿಂದ ಬಜೆಟ್ ಮಂಡನೆಯಾಗುವುದಾದರೆ ಅದಕ್ಕೂ ಮೊದಲೇ ರಾಜೀನಾಮೆ ನೀಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಬಜೆಟ್ಟಿಗೆ ಮುನ್ನ ಲೋಕಾಯುಕ್ತ ನೇಮಕ : ಲೋಕಾಯುಕ್ತ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಂದಲೂ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಲೋಕಾಯುಕ್ತರನ್ನು ನೇಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜ್ಯ ಬಜೆಟ್ ಮಂಡಿಸುವ ಮುನ್ನವೇ ಖಾಲಿ ಬಿದ್ದಿರುವ ಲೋಕಾಯುಕ್ತ ಹುದ್ದೆಯನ್ನು ತುಂಬುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಗದೀಶ್ ಶೆಟ್ಟರ್ ಅವರು ಶನಿವಾರ ಹೇಳಿದ್ದಾರೆ.

2011ರ ಸೆಪ್ಟೆಂಬರಲ್ಲಿ ನ್ಯಾ. ಶಿವರಾಜ್ ವಿ. ಪಾಟೀಲ ಅವರು ವಿವಾದಕ್ಕೆ ಗುರಿಯಾಗಿ ರಾಜೀನಾಮೆ ಸಲ್ಲಿಸಿದ ನಂತರ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದಿದೆ. ಉಪಲೋಕಾಯುಕ್ತ ಹುದ್ದೆಗೆ ಮಾಡಲಾಗಿದ್ದ ನೇಮಕಾತಿ ಕೂಡ ವಿವಾದದಿಂದಾಗಿ ರದ್ದಾಗಿದೆ. ನ್ಯಾ. ಸಂತೋಷ್ ಹೆಗ್ಡೆ ನಿವೃತ್ತಿಯ ನಂತರ ಲೋಕಾಯುಕ್ತ ನೇಮಕಾತಿ ವಿವಾದದಲ್ಲಿಯೇ ಮುಳುಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+