ಮೋದಿ ದೆಹಲಿ ಸಂಚಾರಕ್ಕೆ RSS ಹಸಿರು ನಿಶಾನೆ

ಗುಜರಾತ್-ಟು-ದೆಹಲಿ ಮೋದಿ ಎಕ್ಸ್ ಪ್ರೆಸ್ ಗೆ ಕೆಲ ವಿಘ್ನಗಳ ಹೊರತಾಗಿಯೂ ಬಿಜೆಪಿ-ಪ್ರಧಾನಿ-ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯನ್ನು ಹೆಸರಿಸಲು ತನ್ನ ಅಡ್ಡಿಯೇನೂ ಇಲ್ಲ ಎಂದು RSS ನಾಯಕರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪಕ್ಷವೂ 2014ರ ಲೋಕಸಭೆ ಚುನಾವಣೆಗಾಗಿ ಮೋದಿ ನಾಯಕತ್ವದಲ್ಲಿ ಮುನ್ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇಂದು ಜೈಪುರದಲ್ಲಿ ಆರಂಭವಾಗಿರುವ ಕಾಂಗ್ರೆಸ್ ಚಿಂತನಾ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ-ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸುವ ಸಾಧ್ಯತೆಯಿರುವುದರಿಂದ RSS ಮತ್ತು BJPಯ ಈ ನಡೆಗೆ ಹೆಚ್ಚಿನ ಮಹತ್ವ ಬಂದಿದೆ.
ಆದರೆ ಕಾಲಾಂತರದಲ್ಲಿ ಅಧಿಕೃತವಾಗಿ ಬಿಜೆಪಿ-ಪ್ರಧಾನಿ-ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೊರಹೊಮ್ಮುತ್ತಿದ್ದಂತೆ ಅವರನ್ನು ಗುಜರಾತಿನ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವುದಿಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.
ಆರಂಭದಲ್ಲಿ ಮೋದಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ನೇಮಿಸಿ, ಆನಂತರ ಅದರ ಸಾರಥ್ಯ ವಹಿಸುವಂತೆ ಮಾಡಲಾಗುವುದು. ಮುಂದೆ ಕೇಂದ್ರೀಯ ಚುನಾವಣೆ ಪ್ರಚಾರ ಸಮಿತಿಯಲ್ಲೂ ಅವರಿಗೆ ಗುರುತರ ಜವಾಬ್ದಾರಿ ವಹಿಸಲಾಗುವುದು. ಇದಕ್ಕೆ RSS ನಾಯಕರು ತಮ್ಮದೇನೂ ಅಭ್ಯಯಂತರವಿಲ್ಲವೆಂದು ಸ್ಪಷ್ಟಪಡಿಸಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ದೇಶದ ಜನ ನರೇಂದ್ರ ಮೋದಿ ಅವರಲ್ಲಿ ಈಗಾಗಲೇ ಪ್ರಧಾನಿ ಪ್ರತಿಬಿಂಬ ಕಾಣಲಾರಂಭಿಸಿದ್ದಾರೆ. '2012 ರಲ್ಲಿ ಮುಖ್ಯಮಂತ್ರಿಗಾದಿ; 2014ರಲ್ಲಿ ಪಿಎಂ ಪಟ್ಟ' ಎಂಬ ಮಂತ್ರವನ್ನು ಮೋದಿ ಅಭಿಮಾನಿಗಳೂ ಈಗಾಗಲೇ ಪಠಿಸಿದ್ದಾರೆ. ಇದಕ್ಕೆ ಕಲಶವಿಟ್ಟಂತೆ ಮೋದಿ ಸಹ ಸಮೂಹ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಕಲ್ ರಾಜ್ ಮಿಶ್ರಾ ಅವರು ಹೇಳಿದ್ದಾರೆ.












Click it and Unblock the Notifications