ನಮ್ಮವರ ರುಂಡ ತನ್ನಿ,ಇಲ್ಲವೇ 10 ಪಾಕಿಗಳ ತಲೆ ತನ್ನಿ

ಪಾಕ್ ಸೈನಿಕರು ಹತ್ಯೆಗೈದಿರುವ ಇಬ್ಬರು ಯೋಧರ ಪೈಕಿ ಹೇಮರಾಜ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಿದ ನಂತರ ಮಾತನಾಡುತ್ತಿದ್ದ ಸುಷ್ಮಾ, ನಮ್ಮ ಇಬ್ಬರು ಯೋಧರ ರುಂಡವನ್ನು ಪಾಕ್ ಹಿಂದಿರುಗಿಸದಿದ್ದರೆ ಆ ದೇಶದ 10 ಜನರ ತಲೆ ತನ್ನಿ ಎಂದು ನಾನು ಆಕ್ರೋಶ ವ್ಯಕ್ತ ಪಡಿಸಿದರೆ ತಪ್ಪೇನಿದೆ ಎಂದಿದ್ದಾರೆ.
ಸುಷ್ಮಾ ಸ್ವರಾಜ್ ಹೇಳಿಕೆಯ ಗಂಭೀರತೆ ಅರಿತ ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರನ್ನು ಕೂಡಲೇ ಬಿಜೆಪಿ ನಾಯಕರಾದ ಅರುಣ್ ಜೆಟ್ಲೆ ಮತ್ತು ಸುಷ್ಮಾ ಸ್ವರಾಜ್ ಅವರ ನಿವಾಸಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ವಿವರಿಸಿದೆ.
ಮೆನನ್ ಗಡಿ ನಿಯಂತ್ರಣ ರೇಖೆಯಲ್ಲಿ ವಾಸ್ತವ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ಸುಷ್ಮಾ ಮತ್ತು ಜೆಟ್ಲೆಗೆ ನೀಡಿದ್ದಾರೆ. ವಿಪಕ್ಷ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರ ಗಡಿ ವಿಚಾರದಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಆಶ್ವಾಸನೆಯನ್ನು ಮೆನನ್ ಈ ಇಬ್ಬರು ನಾಯಕರುಗಳಿಗೆ ವಿವರಿಸಿದ್ದಾರೆ.
ಪ್ರತಿಪಕ್ಷಗಳಿಗೆ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತೇವೆ. ದಯವಿಟ್ಟು ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನಮೋಹನ್ ಸಿಂಗ್ ಮಂಗಳವಾರ (ಜ15) ವಿನಂತಿಸಿಕೊಂಡಿದ್ದರು.
ತಿರುಗೇಟು ನೀಡಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ ಎಂದು ಭಾರತದ ಮಿಲಿಟರಿ ಮುಖ್ಯಸ್ಥರು ಪಾಕಿಸ್ಥಾನಕ್ಕೆ ಗಂಭೀರವಾದ ಎಚ್ಚರಿಕೆ ನೀಡಿದ ಬೆನ್ನಲ್ಲೆ ಮನಮೋಹನ್ ಸಿಂಗ್ ವಿಪಕ್ಷ ನಾಯಕರನ್ನು ಸಂಪರ್ಕಿಸಿ ಒಮ್ಮತ ಮೂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಭಾರತದ ಸತತ ಎಚ್ಚರಿಕೆಯ ನಡುವೆಯೂ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿದೆ. ಕಾಶ್ಮೀರ ಗಡಿಯಲ್ಲಿ ಭಾರತದ ಯೋಧರು ಒಬ್ಬ ಪಾಕ್ ಯೋಧನನ್ನು ಕೊಂದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.












Click it and Unblock the Notifications