ವೇಶ್ಯಾಜಾಲ ಕಳಂಕಿತೆ ಶಿಕ್ಷಕಿಗೆ ವಿದ್ಯಾರ್ಥಿನಿಯರ ಗೂಸಾ

ಆದರೆ, ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಾಗಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿನಿಯರ ಸಮೂಹವೇ ಥಳಿಸಿದರೆ ಹೇಗೆ? ಇಂಥದೊಂದು ಘಟನೆ ಶನಿವಾರ ಹುಬ್ಬಳ್ಳಿಯಲ್ಲಿ ನಡೆದಿದೆ. ಶಾಲೆಯ ಮುಖ್ಯಾಪಾಧ್ಯಾಯಿನಿಯಾಗಿದ್ದುಕೊಂಡೇ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಶಿಕ್ಷಕಿಯನ್ನು ಶಾಲೆಯ ವಿದ್ಯಾರ್ಥಿನಿಯರೇ ಮನಬಂದಂತೆ ಥಳಿಸಿ, ಅವರು ನಮಗೆ ಬೇಡ ಎಂದು ಆಗ್ರಹಿಸಿದ ಘಟನೆ ಹುಬ್ಬಳ್ಳಿಯ ವಿದ್ಯಾಪೀಠ ಶಾಲೆಯಲ್ಲಿ ನಡೆದಿದೆ.
ಸಲೋನಿ ಕುರಿ ಎಂಬ ಮುಖ್ಯಾಪಾಧ್ಯಾಯಿನಿಯೇ ಹೈಸ್ಕೂಲ್ ವಿದ್ಯಾರ್ಥಿನಿಯರಿಂದ ಗೂಸಾ ತಿಂದವರು. ವೇಶ್ಯಾವಾಟಿಕೆಯ ಕಳಂಕ ಹೊತ್ತಿದ್ದ ಶಿಕ್ಷಕಿ ಅನೇಕ ತಿಂಗಳುಗಳು ತಲೆಮರೆಸಿಕೊಂಡು, ಶನಿವಾರ ಶಾಲೆಯಲ್ಲಿ ಕಾಣಿಸಿಕೊಂಡಾಗ ರೊಚ್ಚಿಗೆದ್ದ ವಿದ್ಯಾರ್ಥಿನಿಯರೇ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ.
ಚಾಕ್ ಪೀಸು, ಪೊರಕೆ, ಪುಸ್ತಕ, ಸ್ಕೇಲು, ಡಸ್ಟರು, ಲಾಠಿ, ಚಪ್ಪಲಿ.... ಕೈಗೆ ಸಿಕ್ಕಿದ್ದ ವಸ್ತುಗಳನ್ನು ಕೈಗೆ ತೆಗೆದುಕೊಂಡ ವಿದ್ಯಾರ್ಥಿನಿಯರ ಸಮೂಹ ಸಲೋನಿ ಕುರಿಯನ್ನು ಥಳಿಸಿದೆ. ಇಂಥ ಶಿಕ್ಷಕಿ ನಮಗೆ ಬೇಡ ಎಂದು ಆಕಾಶ ಮುಟ್ಟುವಂತೆ ಕಿರುಚಿದ್ದಾರೆ. ಆದರೆ, ಇದಕ್ಕೆಲ್ಲ ಬಗ್ಗದ ಕಳಂಕಿತ ಟೀಚರ್ ನಾನ್ಯಾವ ತಪ್ಪೂ ಮಾಡಿಲ್ಲ, ಇದರ ಹಿಂದೆ ನನಗೆ ಕಂಡರಾಗದ ಶಿಕ್ಷಕರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ : ಶಾಲೆಯಲ್ಲಿದ್ದುಕೊಂಡು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪ ಬಂದಿದ್ದ ಹಿನ್ನೆಲೆಯಲ್ಲಿ ಟಿವಿ9 ಖಾಸಗಿ ವಾಹಿನಿ 2011ರ ಆಗಸ್ಟ್ ತಿಂಗಳಲ್ಲಿ ಸ್ಟಿಂಗ್ ಆಪರೇಷನ್ ಮಾಡಿ, ಸಲೋನಿ ಕುರಿ ವೇಶ್ಯಾಜಾಲವನ್ನು ಬಯಲಿಗೆಳೆದಿತ್ತು. ಈ ಘಟನೆ ನಡೆದ ನಂತರ ಶಿಕ್ಷಕಿ ವಿರುದ್ಧ ಕೋರ್ಟಲ್ಲಿ ಕೇಸು ದಾಖಲಾಗಿತ್ತು.
ಕೋರ್ಟಲ್ಲಿ ಕೇಸು ನಡೆದು, ಸಾಕ್ಷಿಗಳ ಕೊರತೆಯಿಂದಾಗಿ ಸಲೋನಿ ಕುರಿ ಅವರು ನಿರಪರಾಧಿ ಎಂದು ಆದೇಶ ಹೊರಬಂದಿತ್ತು. ಆಗ ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ಇಲಾಖೆಯ ಅಣತಿಯಂತೆ ಮತ್ತು ಕೋರ್ಟ್ ಆದೇಶದಂತೆ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಂಡಿತ್ತು. ಅವರು ಕಳಂಕ ಹೊತ್ತಿದ್ದರಿಂದ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹವಿದ್ದಿದ್ದರೂ ಕ್ರಮ ಕೈಗೊಂಡಿರಲಿಲ್ಲ.
ನಂತರ ಇದ್ದಕ್ಕಿದ್ದಂತೆ ಸಲೋನಿ ಕುರಿ ಶಾಲೆಯಿಂದ ಮಾಯವಾಗಿಬಿಟ್ಟಿದ್ದರು. ಭೂಗತರಾಗಿದ್ದ ಶಿಕ್ಷಕಿ ಮತ್ತೆ ಕಾಣಿಸಿಕೊಂಡಿದ್ದು ಶನಿವಾರದಂದು. ಆಗ ವಿದ್ಯಾರ್ಥಿನಿಯರ ಸಮೂಹ ಅವರ ವಿರುದ್ಧ ಇದ್ದಕ್ಕಿದ್ದಂತೆ ತಿರುಗಿಬಿದ್ದಿದೆ. ಶಿಕ್ಷಕಿ ಮಾತ್ರ ತನ್ನದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ಮಕ್ಕಳು ಬೇಡವೆಂದರೂ ಪರವಾಗಿಲ್ಲ, ಶಿಕ್ಷಕಿಯನ್ನು ಕಿತ್ತುಹಾಕಿದರೆ ಸರಕಾರದಿಂದ ಅನುದಾನ ಸಿಗಲಿಕ್ಕಿಲ್ಲವೆಂಬ ದ್ವಂದ್ವದಲ್ಲಿ ಶಾಲಾ ಮಂಡಳಿ ಲೆಕ್ಕ ಹಾಕುತ್ತಿದೆ. ವಿದ್ಯಾರ್ಥಿನಿಯರ ಭವಿಷ್ಯವೇ ಈ ಹಗರಣದಿಂದಾಗಿ ಅತಂತ್ರವಾಗಿದೆ.












Click it and Unblock the Notifications