ರೇಪ್ ಗೆ ಯತ್ನಿಸಿದರೆ ಸಾಯಿಸ್ಬಿಡಿ: ಪೊಲೀಸ್ ಆಯುಕ್ತ

'ಸ್ವಯಂ ರಕ್ಷಣೆಗಾಗಿ ಹಲ್ಲೆಕೋರನನ್ನು ಯಾವುದೇ ಮಹಿಳೆ ಸಾಯಿಸಬಹುದು. ಕೈಯಲ್ಲಿ ಗನ್ ಇದ್ದರೆ ಗುಂಡಿಟ್ಟು ಸಾಯಿಸಿ, ಇಲ್ಲಾಂದ್ರೆ ಬೇರೆ ಹೇಗಾದರೂ ಸಾಯಿಸಿ ಪರವಾಗಿಲ್ಲ. ನಾನಿದ್ದೇನೆ. ಅಂತಹ ಕೇಸುಗಳನ್ನು ಮನ್ನಾ ಮಾಡುತ್ತೇನೆ' ಎಂದು ಆಯುಕ್ತ ದಿನೇಶ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಿನ್ನೆ ಸೋಮವಾರ ಮಾಧಪುರದಲ್ಲಿ ಮಹಿಳಾ ಟೆಕ್ಕಿಗಳ ಜತೆ ಮಾತನಾಡುತ್ತಾ ಆಯುಕ್ತ ದಿನೇಶ್ ಈ ಫರ್ಮಾನು ಹೊರಡಿಸಿದ್ದಾರೆ. ದೆಹಲಿ ಗ್ಯಾಂಗ್ ರೇಪ್- ಹತ್ಯೆ ಬಳಿಕ ದಿನೇಶ್ ಅವರ ಈ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಎಂದು ಅತ್ಯಾಚಾರ ವಿರೋಧಿಗಳು ಸ್ವಾಗತಿಸಬಹುದಾದರೂ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯಾ? ಎಂದು ಕರ್ನಾಟಕದ ಹೆಣ್ಣುಮಕ್ಕಳೂ ಇದೀಗ ಕೇಳತೊಡಗಿದ್ದಾರೆ.
ಮಹಿಳೆಯರ ವಿರುದ್ಧ ಅಪರಾಧಗಳಿಗೆ ಕಡಿವಾಣ ಹಾಕಲು ಸರಕಾರ ಟೊಂಕಕಟ್ಟಿ ನಿಂತಿದೆ ಎಂದು ಆಯುಕ್ತ ದಿನೇಶ್ ತಿಳಿಸಿದ್ದಾರೆ. ಏನೇ ಆಗಲಿ, ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲು ಕರ್ನಾಟಕ ಗೃಹ ಸಚಿವ ಅಶೋಕ್ ಮೀನ-ಮೇಷಗಳನ್ನು ಎಣಿಸುತ್ತಿರುವಾಗ ಪಕ್ಕದ ಹೈದರಾಬಾದಿನ ಪೊಲೀಸ್ ಆಯುಕ್ತ ದಿನೇಶ್ ರೆಡ್ಡಿ ಭರ್ತಿ ಭರವಸೆ ನೀಡಿರುವುದು ಅಲ್ಲಿನ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ.












Click it and Unblock the Notifications