ರೇಪ್ ಕೇಸಿನಲ್ಲಿ ಗಲ್ಲು ಶಿಕ್ಷೆ, ಅರೋಪಿ ಬಚಾವ್

ಅತ್ಯಾಚಾರ ಹಾಗೂ ಕೊಲೆ ಅಪರಾಧ ಪ್ರಕರಣವೊಂದನ್ನು ಅತ್ಯಂತ ಅಪರೂಪದ ಪ್ರಕರಣಗಳ ಸಾಲಿಗೆ ಸೇರಿಸುವ ಮುನ್ನ ಆರೋಪಿಯ ಮಾನಸಿಕ ಸ್ಥಿತಿಯನ್ನು ಕೂಡ ಪರಿಶೀಲಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಹೀಗಾಗಿ ಕುಡಿದ ವ್ಯಕ್ತಿಯೊಬ್ಬ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಪರಾಧ ಕೃತ್ಯ ಎಸಗಿದರೆ ಹಾಗೂ ಅವನ ಪೂರ್ವ ಹಿನ್ನೆಲೆ ಚೆನ್ನಾಗಿದ್ದರೆ ಆತನ ಗಲ್ಲು ಶಿಕ್ಷೆಯಿಂದ ಬಚಾವಾಗುವ ಸಾಧ್ಯತೆ ಹೆಚ್ಚಾಗಿದೆ.
ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು, ಆಕೆಯ ಸಂಬಂಧಿ ಗರ್ಭಿಣಿಯೊಬ್ಬಳ ಮೇಲೆ ಅತ್ಯಾಚಾರಗೈದ ಅಪರಾಧಿಯೊಬ್ಬನಿಗೆ ಕೆಳನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆಳಿಸಿ ತೀರ್ಪು ನೀಡಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿಯು ಈ ಕೃತ್ಯವನ್ನೆಸಗಿದ ಸಂದರ್ಭದಲ್ಲಿ ಆತ ಪಾನಮತ್ತನಾಗಿದ್ದನೆಂಬ ಹಿನ್ನೆಲೆಯಲ್ಲಿ ಆತ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದನೆಂದು ಅಭಿಪ್ರಾಯಿಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠವು, ಆತನ ಮರಣದಂಡನೆಯನ್ನು ರದ್ದುಪಡಿಸಿತ್ತು.
ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ವಿಚಾರಣೆ ಆರಂಭಗೊಳ್ಳಲು ಇನ್ನು ಕೆಲವೇ ದಿನಗಳಿರುವಂತೆಯೇ, ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಸ್ವತಂತರ್ ಕುಮಾರ್ ಹಾಗೂ ಮೋಹನ್ ಬಿ ಲೊಕೂರ್ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿದೆ.
ಮರಣದಂಡನೆಯನ್ನು ವಿಧಿಸುವಾಗ ಅಪರಾಧ ದಂಡ ಸಂಹಿತೆಯ ಸೆಕ್ಷನ್ 345 (3)ರಲ್ಲಿ ವಿವರಿಸಲಾದ ವಿಶೇಷ ಕಾರಣಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಆದರೆ ಅಪರಾಧಿ ಹಾಗೂ ಆತನ ಹಿನ್ನೆಲೆಯನ್ನು ಕೂಡಾ ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದ ದೋಷಿಯಾದ 23 ವರ್ಶದ ಸಂತೋಷ್ ಕೈಲಾಶ್ ಅಭಾಂಗ್ ಎಂಬಾತ 2007ರ ಸೆಪ್ಟೆಂಬರ್ 10ರಂದು ಪುಣೆಯಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಬೆರಳುಗಳನ್ನು ಕತ್ತರಿಸಿದ ಬಳಿಕ ಆಕೆಯನ್ನು ಬರ್ಬರವಾಗಿ ಇರಿದು ಸಾಯಿಸಿದ್ದ. ಬಳಿಕ ಆತ ಮೃತ ಮಹಿಳೆಯ ಸಂಬಂಧಿಯಾದ ತುಂಬು ಗರ್ಭಿಣಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ. (ಪಿಟಿಐ)












Click it and Unblock the Notifications