ಕೆಆರ್‌ಎಸ್ ಖಾಲಿ, ಅರ್ಥಾತ್ ಬೆಂಗಳೂರಿಗೆ ನೀರಿಲ್ಲ!

ಕನ್ನಂಬಾಡಿ ಬರಿದೋ ಬರಿದು: ಕಳೆದ ಸಾಲಿನಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗೆ ತತ್ವಾರ ಕಂಡುಬಂದಿತ್ತು. ಕೈಕೊಟ್ಟ ಮಳೆಗಾಲ ರಾದ್ಧಾಂತವೆಬ್ಬಿಸಿತ್ತು. ಅದು ಈಗಲೂ ಮುಂದುವರಿದಿದೆ. ಆಗ ಹೋದ ಮಳೆ ಮತ್ತೆ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಕೃಷ್ಣರಾಜ ಸಾಗರ ಬರಿದಾಗಿದೆ. ಅರ್ಥಾತ್ ಬೆಂಗಳೂರಿಗೆ ಕುಡಿಯುವ ನೀರಿಲ್ಲ.
ಹೋಗ್ಲಿ ತಿಪ್ಪಗೊಂಡನಹಳ್ಳಿಯಲ್ಲಾದರೂ ನೀರಿದೆಯಾ ಅಂದರೆ ಕೈತೊಳೆದು ಕೊಳ್ಳುವುದಕ್ಕೂ ಅಲ್ಲೂ ನೀರಿಲ್ಲ. ತತ್ಪರಿಣಾಮ, ಮುಂದಿನ ತಿಂಗಳಲ್ಲಿ ಯಾವುದೇ ಕ್ಷಣದಿಂದ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಸಂಚಕಾರ ಬರಬಹುದು. ಹಾಗಾದಲ್ಲಿ ಈಗೇನು ಜಲಮಂಡಳಿ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿದೆ ಮುಂದೆ ಅದು ವಾರಕ್ಕೊಮ್ಮೆ ಎಂದು ಪರಿವರ್ತನೆಯಾಗಲಿದೆ.
ಈ ದುರ್ಭರ ಪರಿಸ್ಥಿತಿ ಬೆಂಗಳೂರಿಗೇ ಸೀಮಿತವಲ್ಲ. ಇನ್ನೂ ಐದು ಜಿಲ್ಲೆಗಳಿಗೆ ಬಾಧೆಯಿದೆ. ಐದು ಜಿಲ್ಲೆಗಳಿಗೆ ಕುಡಿಯಲು ದಿನನಿತ್ಯ 3,150 ಕ್ಯೂಸೆಕ್ ನೀರು ಬೇಕಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ ಭಾನುವಾರ 83 ಅಡಿ (8.25 ಟಿಎಂಸಿ) ನೀರಿತ್ತು.
ಈ ಪ್ರಮಾಣದ ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಿಗೆ ಬೇಸಿಗೆ ಮುಗಿಯುವವರೆಗೆ ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಈ ಮಧ್ಯೆ, ಜಲಮಂಡಳಿಯು ಕಾವೇರಿ 4ನೇ ಹಂತದಲ್ಲಿ ರಾಜಧಾನಿಗೆ ಪ್ರತಿದಿನ 500 ದಶಲಕ್ಷ ನೀರನ್ನು ಸರಬರಾಜು ಮಾಡುವ ಹೆಚ್ಚು'ವರಿ' ಹೊಣೆ ಹೊತ್ತಿದೆ.
KRS ಹೀಗೆ ಖಾಲಿಯಾಗಿರುವುದರಿಂದ ಒಂದೇ ಪ್ರಯೋಜನ. ಏನಪ್ಪಾ ಅಂದರೆ ತಮಿಳ್ ಸೆಲ್ವಿ ಜಯಲಲಿತಾಗೆ ನೀರು ಬಿಡಿ ಎಂದೇನಾದರೂ ಸುಪ್ರೀಂ ತೀರ್ಪು ಹೊರಬಿದ್ದರೆ 'ಧೈರ್ಯವಾಗಿ ಆಗೊಲ್ಲ. ಅಲ್ಲಿ ನೀರೇ ಇಲ್ಲ' ಎಂದು ನಾಯಕಮಣಿಗಳು ಹೇಳಬಹುದು. ಪರಿಸ್ಥಿತಿ ಅಷ್ಟೊಂದು ದುರ್ಭರವಾಗಲಿದೆ.
ಹಿನ್ನೋಟ: ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ 2002ನೇ ಸಾಲಿನ ಮೇ ತಿಂಗಳಿನಲ್ಲಿ 64 ಅಡಿಗೆ ಕುಸಿದಿತ್ತು. ಆ ನಂತರ 2011ನೇ ಸಾಲಿನಲ್ಲಿ ಭರ್ತಿಯಾಗಿತ್ತು. 2012 ನೇ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯ ಭರ್ತಿಯಾಗಲೇ ಇಲ್ಲ.
ಅಲ್ಲದೇ ತಮಿಳುನಾಡಿಗೆ ಸುಪ್ರೀಂ ಆಗಿ ನೀರನ್ನು ಹರಿಸಲಾಯಿತು. ಹೀಗಾಗಿ ಜಲಾಶಯ ದಿನೇ ದಿನೇ ಖಾಲಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೇಗಪ್ಪಾ ಕುಡಿಯುವ ನೀರು ಸರಬರಾಜು ಮಾಡುವುದು ಎಂಬುದು ಜಲಮಂಡಳಿಗೆ ಪೆಡಂಭೂತವಾಗಿ ಕಾಡಲಿದೆ.
ಬೆಂಗಳೂರಿಗೆ 1800 ಕ್ಯೂಸೆಕ್, ಮೈಸೂರಿಗೆ 200 ಕ್ಯೂಸೆಕ್, ಮಂಡ್ಯ ಜಿಲ್ಲೆಗೆ 350 ಕ್ಯೂಸೆಕ್, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ 300 ಕ್ಯೂಸೆಕ್ ಹಾಗೂ ಬೆಳೆ, ಜಾನುವಾರುಗಳಿಗೆ 500 ಕ್ಯೂಸೆಕ್ ನೀರು ಬೇಕಾಗಿದೆ. ಈಗ ಬೆಳೆದಿರುವ ಬೆಳೆಗಳಿಗೆ ಜನವರಿ ತಿಂಗಳ ಕೊನೆವರೆಗೂ ನೀರು ಸರಬರಾಜು ಮಾಡಬಹುದು ಅಷ್ಟೇ.












Click it and Unblock the Notifications