ಅತ್ಯಾಚಾರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ರಾಜಕೀಯ ಕಾರಣಗಳು ಏನೇ ಇರಬಹುದು ನಮ್ಮ ಶೋಭಾ ಕರಂದ್ಲಾಜೆಯಿಂದ ಹಿಡಿದು ನೆರೆಯ ಜಯಲಲಿತಾ ಅವರಾಗಲಿ, ರೇಪ್ ಪ್ರಕರಣಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕೆಂದು ಎಲ್ಲರೂ ಗರ್ಜಿಸುತ್ತಿದ್ದಾರೆ. ಆದರೆ ಇತ್ತ ಕೇರಳದಲ್ಲಿ ನ್ಯಾಯಾಲಯ ಚಿಕ್ಕದೇ ಆದರೂ ಅತ್ಯಾಚಾರಿಯೊಬ್ಬನಿಗೆ ಮರಣ ದಂಡನೆ ವಿಧಿಸಿ, ಸೈ ಎನಿಸಿಕೊಂಡಿದೆ.
ವಾಸ್ತವವಾಗಿ ನಮ್ಮ ಕಾನೂನಿನಲ್ಲಿ ಅತ್ಯಾಚಾರಿಗೆ ಅಬ್ಬಬ್ಬಾ ಅಂದರೆ ಜೀವಾವಧಿ ಶಿಕ್ಷೆ ವಿಧಿಸಬಹುದು ಅಷ್ಟೇ. ಆದರೆ ಈ ಪ್ರಕರಣದಲ್ಲಿ ಅತ್ಯಾಚಾರವೆಸಗಿದ್ದ ಪಾಪಿ, ಆಕೆಯನ್ನು ಸಾಯಿಸಿದ್ದನಲ್ಲದೆ ಇನ್ನಷ್ಟು ಅಪರಾಧಗಳನ್ನೂ ಎಸಗಿದ್ದ. ಅದನ್ನೆಲ್ಲ ಒಟ್ಟುಗೂಡಿಸಿದ ಕೋರ್ಟ್ ಮುಲಾಜಿಲ್ಲದೆ ಮರಣದಂಡನೆಗೆ ಆದೇಶಿಸಿದೆ.
ತಿರುವನಂತಪುರಂದ ಪ್ರಧಾನ ಸೆಷನ್ಸ್ ನ್ಯಾಯಾಲಯ ನಿನ್ನೆ ಗುರುವಾರ ಈ ಮಹತ್ವದ ತೀರ್ಪು ನೀಡಿದೆ. ಇದನ್ನು ನೋಡಿದಾಗ ಘೋರವಾಗಿ ಅತ್ಯಾಚಾರಕ್ಕೊಳಗಾಗಿ ಸತ್ತುಹೋದ ದೆಹಲಿ ಯುವತಿಯ ಪ್ರಕರಣದಲ್ಲೂ ಕಾಮಪಿಶಾಚಿಗಳು ಗಲ್ಲುಗೇರುವುದರಲ್ಲಿ ಅನುಮಾನವಿಲ್ಲ ಎನಿಸುತ್ತಿದೆ.
ಏನಾಗಿತ್ತು?: 30 ವರ್ಷ ಆಟೋ ಡ್ರೈವರ್ ರಾಜೇಶ್ ಕುಮಾರ್ ಎಂಬ ದುರುಳ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕ್ರೂರವಾಗಿ ಸಾಯಿಸಿಬಿಟ್ಟಿದ್ದ. ತಿರುವನಂತಪುರಂ ನಗರದ ಹೊರವಲಯದಲ್ಲಿ ವಟ್ಟಪ್ಪಾರ ಎಂಬಲ್ಲಿ 10ನೇ ತರಗತಿಯ ಆರ್ಯಾ ಎಂಬ ಬಾಲಕಿಯ ಮನೆಗೆ ನುಗ್ಗಿ, ಈ ಕುಕೃತ್ಯವೆಸಗಿದ್ದ. ಭೂಪ ಎಲ್ಲ ಮುಗಿದ ಮೇಲೆ ಅವಳ ಮೈಮೇಲಿದ್ದ ಎರಡು ಚಿನ್ನದ ಸರಗಳನ್ನೂ ಎಗರಿಸಿದ್ದ.
2012 ಮಾರ್ಚ್ 6: 'ಅಂದು ಏನಾಯಿತೆಂದರೆ ಆರೋಪಿ ಆಟೋ ಡ್ರೈವರ್ ರಾಜೇಶ್ ಕುಮಾರ್ ಪೂರ್ವಯೋಜಿತ ರೀತಿಯಲ್ಲಿ ಆರ್ಯಾ ಒಬ್ಬಳೇ ಇರುವುದನ್ನು ಅರಿತು ಅವಳ ಮನೆಯ ಮುಂದೆ ತನ್ನ ಆಟೋ ನಿಲ್ಲಿಸಿದ್ದ. ಆರ್ಯಾ ಮನೆಯ ಬಾಗಿಲು ಬಡಿದು 'ಆಟೋ ಕೆಟ್ಟು ನಿಂತಿದೆ. ಸ್ಕ್ರೂಡ್ರೈವರ್ ಇದ್ದರೆ ಕೊಡು' ಎಂದು ಆರ್ಯಾಳನ್ನು ಕೇಳಿದ್ದಾನೆ'.
'ಸರಿ, ಅದರಂತೆ ಆರ್ಯಾ ಸಹಾಯ ಮಾಡಿದ್ದಾಳೆ. ಜತೆಗೆ ಆಟೋವನ್ನು ಸ್ವಲ್ಪ ದೂರ ತಳ್ಳು ಎಂದೂ ರಾಜೇಶ ಕೇಳಿದ್ದಾನೆ. ಅದೆಲ್ಲ ಆಗಿ ಆರ್ಯಾ ಮನೆಯೊಳಕ್ಕೆ ವಾಪಸ್ಸು ಬರುತ್ತಿದ್ದಂತೆ ಪಾಪಿ ರಾಜೇಶ ಅವಳನ್ನು ಹಿಂಬಾಲಿಸಿದ್ದಾನೆ. ಮುಂದೆ ಒಂದಾದನಂತರ ಒಂದು ಘೋರ ಕೃತ್ಯಗಳನ್ನು ಎಸಗಿದ್ದಾನೆ, ಯುವರ್ ಆನರ್' ಎಂದು ನ್ಯಾಯಾಲಯಕ್ಕೆ ಚೆನ್ನಾಗಿ ಮನವರಿಕೆಯಾಗುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು.
ಆರೋಪಿ ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದಾನೆ ಎಂಬುದು ನ್ಯಾ ಸುಧೀಂದ್ರಕುಮಾರ್ ಅವರಿಗೆ ಮನವರಿಕೆಯಾಗುತ್ತಿದ್ದಂತೆ 'ಅವನಿಗೆ ಮರಣ ದಂಡನೆ ವಿಧಿಸಿ' ಎಂದು ಆರ್ಡರ್ ಪಾಸ್ ಮಾಡಿದ್ದಾರೆ. ಪ್ರಕರಣ ತ್ವರಿತವಾಗಿ ಮುಗಿಯುವಂತಾಗಲು ಪೊಲೀಸರ ಕ್ಷಿಪ್ರ ಕಾರ್ಚಾಚರಣೆಯೂ ಶ್ಲಾಘನೀಯ ಎಂದು ಜಡ್ಜ್ ಮೆಚ್ಚುಗೆ ಸೂಚಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳೇ ಇರಲಿಲ್ಲ. ಆದರೆ ನಗರದ ಇನ್ಸ್ ಪೆಕ್ಟರ್ ಎಷ್ಟೊಂದು ಕರಾರುವಕ್ಕಾಗಿ ಕೆಲಸ ಮಾಡಿದರೆಂದರೆ ಅವನನ್ನು ನೇರವಾಗಿ ಗಲ್ಲುಗಂಬಕ್ಕೆ ಏರಿಸಬಲ್ಲ ಬಲವಾದ ಸಾಕ್ಷ್ಯವನ್ನು ತಮ್ಮ ಪೊಲೀಸ್ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಸಂಗ್ರಹಿಸಿದ್ದರು.
ಅದು ಹೇಗೋ ಸುಳಿವರಿತು ಉಪಾಯವಾಗಿ ರಾಜೇಶನ ವೀರ್ಯವನ್ನು ಕಲೆ ಹಾಕಿ, ಅದನ್ನು ಬಾಲಕಿ ಆರ್ಯಾಳ ಮೇಲೆ ಬಿದ್ದಿದ್ದ ವೀರ್ಯಕ್ಕೆ ಹೋಲಿಕೆ ಮಾಡಿ, 'ಯಸ್ ಇವನೇ ತಪ್ಪಿತಸ್ಥ ಪಾತಕಿ' ಎಂಬ ತೀರ್ಮಾನಕ್ಕೆ ಬಂದಿದ್ದರು.
ಇನ್ಸ್ ಪೆಕ್ಟರ್ ಅಜೀಂ ಸರ್ ಜ್ಞಾಪಕಕ್ಕೆ ಬರುತ್ತಿದ್ದಾರೆ: ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಂಡ ಅಪರೂಪದ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಜ್ಞಾಪಕಕ್ಕೆ ಬರುತ್ತಿದ್ದಾರೆ. ಅವರ ಕಾಲದಲ್ಲಿ ರಾಜಧಾನಿಯಲ್ಲಿ ನಡೆದಿದ್ದ ಅನೇಕ ಅತ್ಯಾಚಾರ ಪ್ರಕರಣಗಳಿಗೆ ಕ್ಷಿಪ್ರವಾಗಿ ತಾರ್ಕಿಕ ಅಂತ್ಯ ಕಾಣಿಸಿದ್ದರು. ಒಂದು ಪ್ರಕರಣದಲ್ಲಂತೂ ಬಾಲಕಿಯೊಬ್ಬಳನ್ನು ಪಾಪಿಯೊಬ್ಬ ಅತ್ಯಾಚಾರಕ್ಕೆ ಗುರಿಪಡಿಸಿ, ರಸ್ತೆ ಬದಿ ಕಸದ ಗುಡ್ಡೆಗೆ ಹಾಕಲಾಗಿದ್ದ ಬೆಂಕಿಯಲ್ಲಿ ಆ ಬಾಧಿತಳನ್ನು ಹಾಕಿದ್ದ.
ಪ್ರಕರಣವನ್ನು ಬೇಧಿಸಿದ ಅಜೀಂ ಸರ್, ಕೋರ್ಟು ಕಚೇರಿಗೆಂದು ಅಲೆಯಲಿಲ್ಲ. ಆರೋಪಿಯನ್ನು ಪತ್ತೆ ಹಚ್ಚಿ, ಅವನನ್ನು ಸೀದಾ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತಮ್ಮ ಸರ್ವಿಸ್ ರಿವಾಲ್ವರಿನಿಂದ ಅವನನ್ನು ಉಡಾಯಿಸಿಬಿಟ್ಟು, ಆ ಬಾಲಕಿಯ ಆತ್ಮಕ್ಕೆ ಶಾಂತಿ ಕೋರಿದರು. ಇಂತಹ ಕಾನೂನು, ಕಾನೂನು ರಕ್ಷಕರಿಗೆ ಒಂದು ಹ್ಯಾಟ್ಸ್ ಆಫ್ ಹೇಳುವುದು ನಮ್ಮ ಕರ್ತವ್ಯವಲ್ಲವೇ?












Click it and Unblock the Notifications