ದಿಲ್ಲಿ ಅತ್ಯಾಚಾರ ಬಾಧಿತೆ ಸಿಂಗಾಪುರ ಆಸ್ಪತ್ರೆಗೆ ದಾಖಲು

23 ವರ್ಷದ ಈ ಯುವತಿಯನ್ನು ವಿಶೇಷ ಆಂಬುಲೆನ್ಸ್ ಸೌಲಭ್ಯವುಳ್ಳ ವಿಮಾನದಲ್ಲಿ ಭಾರತ ಸರಕಾರದ ಸೂಚನೆಯ ಮೇರೆಗೆ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಸ್ಥಳಾಂತರಿಸಿದ್ದಾರೆ. ಬಾಧಿತ ಯುವತಿಯ ಆರೋಗ್ಯ ಸ್ಥಿರವಾಗಿದೆ.
ಆದರೂ ಕೆಲವೊಂದು ವಿಶೇಷ ಚಿಕಿತ್ಸೆಗಳ ಅಗತ್ಯವಿರುವುದರಿಂದ ಸಿಂಗಾಪುರ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಆಸ್ಪತ್ರೆಯ ಅಧೀಕ್ಷಕ, ಹುಬ್ಬಳ್ಳಿಯ ಡಾ. ಬಿಡಿ ಅಥಣಿ ಬುಧವಾರ ರಾತ್ರಿ ತಿಳಿಸಿದ್ದಾರೆ.
ಇಬ್ಬರು ಪರಿಣತ ವೈದ್ಯರು, ಯುವತಿಯ ಕುಟುಂಬದವರು ಸೇರಿದಂತೆ ಒಟ್ಟು 10 ಮಂದಿಯ ಜತೆಗೆ ಕೋಟ್ಯಂತರ ಮಂದಿಯ ಶುಭ ಹಾರೈಕೆಗಳೊಂದಿಗೆ ಯುವತಿಯು ವಿಶೇಷ ವಿಮಾನದಲ್ಲಿ ಇಂದು ಬೆಳಗಿನ ಜಾವ ಸಿಂಗಾಪುರ ತಲುಪಿಕೊಂಡಿದ್ದಾರೆ.
ಕಾಮಾಂಧರ ಪೈಶಾಚಿಕ ಕೃತ್ಯದಿಂದ ಯುವತಿಯ ಕರುಳು ಸಂಪೂರ್ಣ ನಾಶವಾಗಿತ್ತು. ತುರ್ತು ಚಿಕಿತ್ಸೆ ನೀಡಿ ನಾಲ್ಕಾರು ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಯುವತಿಯ ಕರುಳು ಕಸಿ ಸೇರಿದಂತೆ ಬಹು ಅಂಗಾಂಗ ಚಿಕಿತ್ಸೆಯ ಅಗತ್ಯವಿದೆ. ಇದಕ್ಕೆ ಸಿಂಗಾಪುರ ಆಸ್ಪತ್ರೆಯೇ ಸೂಕ್ತ ಎಂದು ಆಸ್ಪತ್ರೆಯ ವೈದ್ಯರ ತಂಡ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು.
ಈ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರಕಾರ, ಅಷ್ಟೂ ಚಿಕಿತ್ಸಾ ವೆಚ್ಚವನ್ನು ತಾನೇ ಭರಿಸುವ ಭರವಸೆ ನೀಡಿ, ಯುವತಿಯನ್ನು ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕಳಿಸಿಕೊಟ್ಟಿದೆ.
ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು: ಕೊಳ್ಳೆ ಹೊಡೆದ ಮೇಲೆ ದಿಡ್ಡಿಯ ಬಾಗಿಲು ಹಾಕಿದರು ಎಂಬಂತೆ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಹಾಗೂ ರಾತ್ರಿ ಬಸ್‌ನಲ್ಲಿ ಗೃಹರಕ್ಷಕರನ್ನು ನೇಮಿಸಲು ದೆಹಲಿ ಸರ್ಕಾರ ಘಟನೆ ನಡೆದ 10 ದಿನಗಳ ನಂತರ ತೀರ್ಮಾನ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಈ ಸಂಬಂಧ ಸಾರಿಗೆ ಸಚಿವ ರಮಾಕಾಂತ್ ಗೋಸ್ವಾಮಿ ಜತೆ ಬುಧವಾರ ಸಭೆ ನಡೆಸಿದರು. ಸಾರಿಗೆ ಆಯುಕ್ತ ರಾಜಿಂದರ್ ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾತ್ರಿ ವೇಳೆ 45 ಬಸ್‌ಗಳ ಬದಲು 85 ಬಸ್ ವ್ಯವಸ್ಥೆ ಮಾಡುವಂತೆ ಶೀಲಾ ಅವರು ಸಾರಿಗೆ ವಿಭಾಗಕ್ಕೆ ತಾಕೀತು ಮಾಡಿದ್ದಾರೆ.












Click it and Unblock the Notifications