ಬಿಜೆಪಿ ಪವಿತ್ರ ಗಂಗಾನದಿ,ಎಂದೂ ಬತ್ತುವುದಿಲ್ಲ:ಡಿಸಿಎಂ

ನಮ್ಮ ಪಕ್ಷವನ್ನು ಯಾರಿಂದಲೂ ಏನೂ ಮಾಡೋಕಾಗದು ಎಂದು ಉಪಮುಖ್ಯಮಂತ್ರಿ ಆಶೋಕ್ ಭರವಸೆಯ ಮಾತನ್ನಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಅಶೋಕ್, ಸೂರ್ಯಚಂದ್ರರು ಇರುವ ತನಕ ಬಿಜೆಪಿ ಇರುತ್ತದೆ. ಜೀವನದಿ ಗಂಗಾನದಿಯಲ್ಲಿ ಒಂದು ಬಿಂದಿಗೆ ನೀರು ಯಾರಾದರೂ ತೆಗೆದುಕೊಂಡು ಹೋದರೆ ಅದು ಬತ್ತುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದಾರೆ.
ಭಾಗ್ಯಲಕ್ಷ್ಮಿ ಬಾಂಡ್, ಸೈಕಲ್ ವಿತರಣೆ ಕೆಲವರು ತನ್ನದೇ ಸಾಧನೆಯೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅದು ನಮ್ಮ ಪಕ್ಷದ ಹೆಮ್ಮೆಯ ಸಾಧನೆ. ಯಾರೊಬ್ಬರ ವೈಯಕ್ತಿಕ ಸಾಧನೆಯಲ್ಲ.
ಬಿಜೆಪಿಯಲ್ಲಿ ಕಾರ್ಯಕರ್ತರು ನಾಯಕರನ್ನು ಆಯ್ಕೆ ಮಾಡುತ್ತಾರೆ. ಇದು ಯಾರೊಬ್ಬರ ಪಕ್ಷವಲ್ಲ, ಮುಂದೆಯೂ ಏಕ ವ್ಯಕ್ತಿಯ ಪಕ್ಷವಾಗಿರುವುದಿಲ್ಲ ಎಂದು ಅಶೋಕ್, ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಜಯಭೇರಿ ಬಾರಿಸಿದ ಉದಾಹರಣೆಗಳೇ ಇಲ್ಲ. ಇನ್ನು ಹೊಸ ಪಕ್ಷ ಹುಟ್ಟು ಹಾಕಿದ ಇವರನ್ನು ಯಾರಾದರೂ ಕೇಳುತ್ತಾರೆಯೇ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಭಾತ್ಯಾಗವೆಂದು ವೃಥಾ ಕಾಲಹರಣ ಮಾಡಿದರು. ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ತಮ್ಮ ತಪ್ಪನ್ನು ಮುಚ್ಚಿ ಹಾಕಲು ರಾಜ್ಯಪಾಲರ ಬಳಿ ದೂರು ನೀಡಿದ್ದಾರೆಂದು ಆಶೋಕ್ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications