'ಕೈ'ಜೋಡಿಸೋಲ್ಲ, 224ಕ್ಕೂ ಕೆಜೆಪಿ ಸ್ಪರ್ಧೆ: ಬಿಎಸ್‌ವೈ

224 ಸ್ಥಾನಗಳಿಗೂ ಸ್ಪರ್ಧೆ
'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳಿಗೂ KJP ಸ್ಪರ್ಧಿಸಲಿದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು. ಹಾಲಿ ಶಾಸಕರು, ಸಚಿವರಲ್ಲಿ ಸುಮಾರು 60 ಮಂದಿ ನನ್ನ ಬೆಂಬಲಿಗರಿದ್ದಾರೆ. ಅವರಿಗೆ ಸ್ಥಾನ ನೀಡಿ ಉಳಿದಂತೆ ಇನ್ನೂ 162 ಸ್ಥಾನಗಳಲ್ಲಿ ಹೊಸಬರನ್ನು ಸ್ಪರ್ಧಾಕಣಕ್ಕೆ ಇಳಿಸಲು ಅವಕಾಶವಿದೆ' ಎಂದ ತಮ್ಮ ಫ್ಯೂಚರ್ ಪ್ಲಾನ್ ತಿಳಿಸಿದರು.
ಅಲ್ಲಿಗೆ, ಸಿಬಿಐ ಸುಳಿಯಿಂದ ಹೊರಬರಲು ಯಡಿಯೂರಪ್ನೋರು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರಂತೆ ಎಂಬುದು ಇನ್ನೂ ಗಾಳಿಸುದ್ದಿಯಾಗಿಯೇ ಇದೆ.
ಇಂದು ರಾಷ್ಟ್ರೀಯ ಪಕ್ಷಗಳು ಕೂಡಾ ಪ್ರಾದೇಶಿಕ ಪಕ್ಷಗಳಾಗಿವೆ. ಕೇಂದ್ರದ ಮೇಲೆ ಯಾವ ರೀತಿ ಹಿಡಿತ ಸಾಧಿಸಬಹುದು ಎಂಬುದನ್ನು ಪ್ರಾದೇಶಿಕ ಪಕ್ಷಗಳು ಈಗಾಗಲೇ ತೋರಿಸಿವೆ. ಕಾವೇರಿ ನೀರು ಹಂಚಿಕೆ ಉದಾಹರಣೆಯನ್ನೇ ತೆಗೆದುಕೊಂಡರೂ ತಮಿಳುನಾಡಿನಲ್ಲಿ ಕರುಣಾನಿಧಿಯಾಗಿರಲಿ ಅಥವಾ ಜಯಲಲಿತಾ ಮುಖ್ಯಮಂತ್ರಿಯಾಗಿರಲಿ ಕೇಂದ್ರ ಸರಕಾರ ಅವರ ಪರವಾಗಿ ನಿಲ್ಲುತ್ತದೆ ಎಂದರು.
ನನಗೆ ನನ್ನ ಸಿದ್ಧಾಂತವೇ ಮುಖ್ಯ. ಕೆಜೆಪಿ ನಾಡಿನ ಎಲ್ಲ ವರ್ಗದ ಜನರ ಪಕ್ಷ ಆಗಬೇಕು. ಮುಸ್ಲಿಂ, ಹಿಂದೂ, ಕ್ರೈಸ್ತರು ಎಂಬ ಯಾವುದೇ ಧರ್ಮ, ಮತ ಬೇಧವಿಲ್ಲದೆ ಎಲ್ಲರನ್ನು ಒಳಗೊಂಡಿರಬೇಕು ಎಂಬುದು ನನ್ನ ಧ್ಯೇಯ. ಸಂತೋಷದ ವಿಚಾರವೆಂದರೆ ಅಧಿಕ ಪ್ರಮಾಣದಲ್ಲಿ ಅಲ್ಪಸಂಖ್ಯಾಕರು, ಪರಿಶಿಷ್ಟ ಜಾತಿ, ಪಂಗಡ, ಯುವಜನತೆ ಕೆಜೆಪಿಯತ್ತ ಬರುತ್ತಿದ್ದಾರೆ ಎಂದರು.
ಯುಆರ್ ಅನಂತಮೂರ್ತಿ ಕೆಜೆಪಿ ತೆಕ್ಕೆಗೆ:
ಸುವರ್ಣ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಹುದು, ಯಾವ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂಬ ಬಗ್ಗೆ ಚಿಂತಕರು, ತಜ್ಞರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನ, ಸಲಹೆಗಳನ್ನು ಕೋರಿದ್ದೇನೆ ಎಂದೂ ಯಡಿಯೂರಪ್ಪ ಇದೇ ವೇಳೆ ಹೇಳಿದರು.
ಡಾ. ಯುಆರ್ ಅನಂತಮೂರ್ತಿ, ಚಂಪಾ, ಹಂಪನಾ, ಡಾ. ನಲ್ಲೂರು ಪ್ರಸಾದ್, ಟಿವಿ ಮೋಹನ್‌ದಾಸ್ ಪೈ, ವಿಎಸ್ ಪಾಟೀಲ್, ಜಿಎನ್ ಹೆಗ್ಡೆ , ಮುಮ್ತಾಜ್ ಅಲಿ ಖಾನ್ ಅವರು ಇದಕ್ಕೆ ಸಮ್ಮತಿಸಿದ್ದು, ಇವರನ್ನೊಳಗೊಂಡ ಸಮಿತಿಯನ್ನು ಕೆ ಶ್ರೀನಿವಾಸ ಅವರ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಯಡಿಯೂರಪ್ಪ ಘೋಷಿಸಿದರು.












Click it and Unblock the Notifications