'ಲಿಂಗಾಯತನಾದ ಕಾರಣಕ್ಕೇ ಬಿಎಸ್‌ವೈ ನನ್ನ ತುಳಿದರು'

ಇದೇ ವೇಳೆ, 'ಶೆಟ್ಟರ್ ಅವರೇ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ನಾನು, ನೆನಪಿರಲಿ' ಎಂದು ಟಿವಿ ಚಾನೆಲ್ಲುಗಳಿಗೆ ಮುಖ ಮಾಡಿ ಯಡಿಯೂರಪ್ಪ ಪದೇ ಪದೇ ಎಚ್ಚರಿಸುತ್ತಿದ್ದರ ಬಗ್ಗೆ ಶೆಟ್ಟರ್ ಕೊನೆಗೂ ಧೈರ್ಯದಿಂದ ತಿರುಗೇಟು ನೀಡಿದ್ದಾರೆ. 'ವಾಸ್ತವವಾಗಿ ನಾನು ಮುಖ್ಯಮಂತ್ರಿಯಾಗಿದ್ದು ಶಾಸಕರ ಬೆಂಬಲ ಹಾಗೂ ಒತ್ತಾಯದಿಂದ. ಶಾಸಕರು ನನ್ನ ನಾಯಕತ್ವ ಒಪ್ಪಿಕೊಂಡಿದ್ದರಿಂದ ಮುಖ್ಯಮಂತ್ರಿಯಾಗಿದ್ದೇನೆ. ನಾನೇ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಯಡಿಯೂರಪ್ಪ ಹೇಳುವುದು ಸರಿಯಲ್ಲ' ಎಂದು ಗುಡುಗಿದ್ದಾರೆ.
ಸದಾನಂದ ಹಾದಿಯಲ್ಲಿ ಶೆಟ್ಟರ್:
ಸದಾನಂದ ಗೌಡರ ಹಾದಿಯಲ್ಲೇ ತಿರುಗಿಬಿದ್ದಿರುವ ಶೆಟ್ಟರ್ ಇನ್ನೂ ಏನೆಲ್ಲ ಹೇಳಿದ್ದಾರೆ:
'ಲಿಂಗಾಯತ ನಾಯಕನಾಗಿ ನಾನು ಪ್ರತಿಸ್ಪರ್ಧಿಯಾಗುತ್ತೇನೆಂದು ಯಡಿಯೂರಪ್ಪಗೆ ಹಿಂದೆಯೇ ಅಳುಕಿತ್ತು. ಲಿಂಗಾಯತ ಸಮುದಾಯದ ನಾಯಕತ್ವ ವಿಷಯದಲ್ಲಿ ಪೈಪೋಟಿ ಉಂಟಾಗುತ್ತದೆ ಎಂಬ ಕಾರಣಕ್ಕೇ ನನ್ನ ವ್ಯಕ್ತಿತ್ವಕ್ಕೆ ಅರ್ಹವಾಗಿದ್ದ ಸಚಿವ ಹುದ್ದೆಯ ಬದಲಾಗಿ ಸ್ಪೀಕರ್ ಹುದ್ದೆ ನೀಡಲಾಯಿತು.
ಏಕೆ ಎಂದು ಕೇಳಿದಾಗ ಹೈಕಮಾಂಡ್ ಹೇಳಿದೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಆಗ ನಾನು ಲಾಬಿ ಮಾಡುವ ಮಟ್ಟಕ್ಕೆ ಇಳಿಯದೇ ಪಕ್ಷ ಕೊಟ್ಟ ಹುದ್ದೆಯನ್ನು ಒಪ್ಪಿಕೊಂಡೆ. ಅನಂತರ ಶಾಸಕರೇ ನನ್ನ ನಾಯಕತ್ವ ಗುರುತಿಸಿ ಆಗ್ರಹ ಮಾಡಿದಾಗ ಸಚಿವ ಸ್ಥಾನ ನೀಡುವುದು ಅನಿವಾರ್ಯವಾಯಿತು ಇನ್ನು ಅವರಾಗಿಯೇ ಮುಖ್ಯಮಂತ್ರಿ ಮಾಡಿದ್ದೂ ಅಲ್ಲ. ಶಾಸಕರ ಒತ್ತಡ ಹಾಗೂ ಅನಿವಾರ್ಯತೆಗೆ ಸಿಲುಕಿ ಯಡಿಯೂರಪ್ಪ ಒಪ್ಪಿದರು, ಮುಖ್ಯಮಂತ್ರಿ ಆದೆ.
ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಯಾಗಿ ಅವರು, 'ನನ್ನಿಂದಲೇ ಇಷ್ಟೆಲ್ಲಾ ಸಾಧನೆ ಆಗಿದೆ. ನನ್ನಿಂದಲೇ ಸರ್ಕಾರ ಬಂದಿದೆ. ಪಕ್ಷ ಸಂಘಟನೆಯಾಗಿದೆ ಎಂಬ ಅಹಂಭಾವ ಇರಬಾರದು. ನನ್ನನ್ನೂ ಸೇರಿಸಿಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಯಾವೊಬ್ಬ ವ್ಯಕ್ತಿ ಅಹಂಭಾವ ತೊರೆಯಬೇಕು. ಆ ಅಹಂ ಇದ್ದರೆ ಮಾಡಿದ ಕೆಲಸಕ್ಕೆ ಅರ್ಥವೇ ಬರುವುದಿಲ್ಲ'
'ಅಷ್ಟಕ್ಕೂ ಪಕ್ಷ ಸಂಘಟನೆಗೊಳ್ಳುವುದು ಯಾವೊಬ್ಬ ವ್ಯಕ್ತಿಯಿಂದ ಅಲ್ಲ. ಪಕ್ಷಕ್ಕೆ ಎಲ್ಲ ಕಾರ್ಯಕರ್ತರು ಬಲ ತುಂಬಿರುತ್ತಾರೆ. ಅದಕ್ಕೆ ಒಬ್ಬ ನಾಯಕ ಇರುತ್ತಾನೆ. ಅವರನ್ನು ನೇಮಿಸುವುದೂ ಕಾರ್ಯಕರ್ತರೇ. ಈ ಹಿಂದೆ ಕೂಡ ನಾನು ಸೇರಿದಂತೆ ಅನಂತಕುಮಾರ್, ಕೆಎಸ್ ಈಶ್ವರಪ್ಪ ಹೀಗೆ ಅನೇಕರು ಪಕ್ಷದ ಅಧ್ಯಕ್ಷರಾಗಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಅಲೆಯೂ ಇತ್ತು. ಅದಕ್ಕೆ ಅರ್ಥ ಇಲ್ಲವೇ?'
ಇನ್ನು ಹಾವೇರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಾಸಕರಿಗೆ ಒತ್ತಡ ಇತ್ತು ಎಂಬ ಗುಮಾನಿ ಇದೆ. ಯಾವ ರೀತಿಯ ಒತ್ತಡ ಇತ್ತು ಎಂಬುದನ್ನು ಕೂಲಂಕಷವಾಗಿ ಚರ್ಚಿಸಿ, ರಾಜಕೀಯದ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಪಕ್ಷದ ಚೌಕಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಮುಖಂಡರು, ವರಿಷ್ಠರು ತೀರ್ಮಾನಿಸುತ್ತಾರೆ.
ಲಿಂಗಾಯತ ನಾಯಕ ಯಾರು?
ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಎನ್ನುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, 'ಅದೇನೂ ಅವರು ಕಲ್ಟಿವೇಟ್ ಮಾಡಿಕೊಂಡಿದ್ದಲ್ಲ' ಎಂದು ಮುಗುಳ್ನಕ್ಕರು. 'ನಾಯಕತ್ವ ಎನ್ನುವುದು ನಾವು ಯಾವೊಂದು ಸಮುದಾಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಿಕೆಯನ್ನು ಆಧರಿಸಿರುತ್ತದೆ. ಅದಕ್ಕೆ (ಲಿಂಗಾಯತ ಸಮುದಾಯಕ್ಕೆ) ಪರ್ಯಾಯ ನಾನೇ ಎಂದು ಅನಿಸಿದ್ದಕ್ಕಾಗಿಯೇ ನಾನು ಇಲ್ಲಿ ಬಂದು ನಿಂತಿದ್ದೇನೆ' ಎನ್ನುವ ಮೂಲಕ ತಾವೇ ಲಿಂಗಾಯತ ಸಮುದಾಯದ ನಾಯಕ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದರು.












Click it and Unblock the Notifications