ಡಾಲರ್ಸ್ ಕಾಲೋನಿ ಮನೆಯಲ್ಲಿ ಟೀ ಪಾರ್ಟಿಯಂತೆ
ಬೆಂಗಳೂರು, ಡಿ.11: ಕೆಜೆಪಿ ಸಮಾವೇಶಕ್ಕೆ ಆಗಮಿಸಿದ್ದ 14 ಜನ ಶಾಸಕರ ವಿರುದ್ಧ ಕ್ರಮ ತೆಗೆದುಕೊಂಡರೆ ಹುಷಾರ್ ಎಂದು ಯಡಿಯೂರಪ್ಪ ಗರ್ಜಿಸಿದ್ದಾರೆ. ಅದರೆ, ಶಾಸಕರು ಮಾತ್ರ ಇದರಿಂದ ಗಲಿಬಿಲಿಗೊಂಡಿದ್ದಾರೆ. ಹೀಗಾಗಿ ಕೆಲ ಶಾಸಕರು ಬಿಎಸ್ ವೈ ಮನೆಯಲ್ಲಿ ಆಗಲೇ ಟೀ ಪಾರ್ಟಿ ಶುರು ಮಾಡಿ ಬಿಟ್ಟಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸದ ಬಸವರಾಜ ಪಾಟೀಲ್ ಅಟ್ಟೂರ್, ಯಡಿಯೂರಪ್ಪ ಅವರ ಬೆಂಬಲ ಬಂದಿರುವ ವಲಸೆ ರಾಜಕಾರಣಿ ಕೆಎಚ್ ಶ್ರೀನಿವಾಸ್, ಎಂಎಲ್ ಸಿ ಎಂಡಿ ಲಕ್ಷ್ಮಿ ನಾರಾಯಣ ಸೇರಿದಂತೆ ಹಲವಾರು ಮುಖಂಡರು ಒಂದೆಡೆ ಸೇರಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮುಖಂಡರು ಮಂಗಳವಾರ (ಡಿ.11) ಕೆಜೆಪಿ ಬಾವುಟದಡಿ ಕೂತು ಸಭೆ ನಡೆಸಿದ್ದಾರೆ.

ಈ ನಡುವೆ ಶಾಸಕ ಸುನಿಲ್ ವಲ್ಯಾಪುರೆ ಅವರ ರಾಜೀನಾಮೆಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂಗೀಕರಿಸಿದ್ದಾರೆ. ಹೀಗಾಗಿ ಬಿಜೆಪಿ ಹುದ್ದೆ ಕಳೆದುಕೊಂಡಿದೆ. ಸಂಪುಟದಿಂದ ಹೊರ ಹಾಕಲ್ಪಟ್ಟಿರುವ ಬಿಜೆ ಪುಟ್ಟಸ್ವಾಮಿ ಅವರ ಸಹಕಾರ ಖಾತೆ ಸುರೇಶ್ ಕುಮಾರ್ ಅವರ ಹೆಗಲೇರಿದೆ.
ಈ ನಡುವೆ ಕೆಜೆಪಿ ಸಮಾವೇಶಕ್ಕೆ ಬಂದು ಯಡಿಯೂರಪ್ಪ ಅವರ ಜೊತೆ ಚಹಾ ಕುಡಿದ ಮಂದಿಯಲ್ಲಿ ಕೆಲವರು ಉಲ್ಟಾ ಹೊಡೆಯುತ್ತಿದ್ದಾರಂತೆ.. ಅಂಥವರು ಯಾರು ಯಾರು ಎಂಬುದು ಇಲ್ಲಿ ಓದಿಕೊಳ್ಳಿ
ಬಿಜೆಪಿಯ ಮುಂದಿನ ಟಾರ್ಗೆಟ್ ಆಗಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಹಾಗೂ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕ್ರಮ ಜರುಗಿಸಬೇಕೆ? ಬೇಡವೇ ಎಂಬುದರ ಬಗ್ಗೆ ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ ಎದ್ದಿದೆ.
ಕೆಜೆಪಿ ಬೆಂಬಲಿಗರ ಖಾತೆ ಬದಲು : ಬಿಜೆಪಿ ಬಿಕ್ಕಟ್ಟು ಬಗೆಹರಿಸಲು ಮತ್ತೊಮ್ಮೆ ಧರ್ಮೇಂದ್ರ ಪ್ರಧಾನ್ ಅವರು ಡೆಲ್ಲಿಯಿಂದ ಹಾರಿ ಕರ್ನಾಟಕದ ಗಡಿ ನಗರ ಬೆಳಗಾವಿಗೆ ಬರುತ್ತಿದ್ದಾರೆ. ಕೆಜೆಪಿ ಸಮಾವೇಶಕ್ಕೆ ಹೋಗಿದ್ದ ಶಾಸಕರ ವಿರುದ್ಧ ಕ್ರಮ ಜರುಗಿಸುವುದರ ಜೊತೆಗೆ ಮುಖ್ಯವಾಗಿ ಸಚಿವರ ಖಾತೆ ಬದಲಾವಣೆಗೆ ಬಿಜೆಪಿ ಮುಂದಾಗಿದೆ.
ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ರೇವೂ ನಾಯಕ್ ಬೆಳಮಗಿ ಖಾತೆ ಬದಲಾಗುವ ಸಾಧ್ಯತೆ ಇದೆ.
ಆದರೆ, ಖಾತೆ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವಿಷಯದಲ್ಲಿ ಯಡಿಯೂರಪ್ಪ ಹಾಗೂ ಸದಾನಂದ ಗೌಡ ಅವರೇ ಎಲ್ಲರನ್ನು ಮೆಚ್ಚಿಸಲು ಸಾಧ್ಯವಾಗದೇ ಕೈ ಚೆಲ್ಲಿದ್ದರು.
ಈಗ ಶೆಟ್ಟರ್ ಅವರ ಸರದಿ. ಬಿಕ್ಕಟ್ಟಿನ ನಡುವೆ ಖಾತೆ ಅದಲು ಬದಲು ಮಾಡುವುದೂ ಒಂದು ಸರ್ಕಾರದ ಬುಡವನ್ನು ಅಲ್ಲಾಡಿಸುವುದೂ ಒಂದೇ ಎಂಬ ಅರಿವು ಶೆಟ್ಟರ್ ಅವರಿಗಿದೆ. ಹೀಗಾಗಿ ಪ್ರಧಾನ್ ಅವರು ನೆರವಿಗೆ ಧಾವಿಸಿ ಬರುತ್ತಿದ್ದಾರೆ.












Click it and Unblock the Notifications