ಬಿಐಎಎಲ್ ಗೆ ಕೆಂಪೇಗೌಡರ ಹೆಸರು ಸರ್ಕಾರ ಸಮ್ಮತಿ

ಬೆಳಗಾವಿಯ ಸುವರ್ಣಸೌಧದ ವಿಧಾನಸಭೆಯಲ್ಲಿ ಸೋಮವಾರ (ಡಿ.10) ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಅವರು, ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಡಿಸಿದರು.
ಉಪಸಭಾಧ್ಯಕ್ಷ ಯೋಗೀಶ್‌ಭಟ್ ಅವರು, ಈ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಸದನದಲ್ಲಿದ್ದ ಎಲ್ಲಾ ಸದಸ್ಯರೂ ಪಕ್ಷಭೇದ ಮರೆತು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾವನೆಗೆ ಧ್ವನಿಮತದ ಸಮ್ಮತಿ ಸೂಚಿಸಿದರು.
ವಿಧಾನಸಭೆ ಕೈಗೊಂಡಿರುವ ಈ ನಿರ್ಣಯವನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಿದೆ. ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮತ್ತು ವಿಮಾನನಿಲ್ದಾಣಗಳ ಪ್ರಾಧಿಕಾರ ತನ್ನ ಅನುಮತಿ ನೀಡಬೇಕಿದೆ.
ನಂತರವಷ್ಟೇ ದೇವನಹಳ್ಳಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಿರ್ಮಾತೃ ಕೆಂಪೇಗೌಡನ ಹೆಸರು ಬಂದು, ಕೆಂಪೇಗೌಡ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣಗೊಳ್ಳಲು ಸಾಧ್ಯ.
ವಿಮಾನ ನಿಲ್ದಾಣ ಆರಂಭವಾದಾಗ ಅದಕ್ಕೆ ಹೆಸರೇ ನೀಡಬೇಕು ಎಂಬ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ಅಣ್ಣ ಬಸವಣ್ಣ, ಸರ್ ಎಂ ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್, ಟಿಪ್ಪು ಸುಲ್ತಾನ್ ಮುಂತಾದ ಹೆಸರುಗಳು ಕೇಳಿಬಂದಿದ್ದವು.
ಡಾ ಹೇಮಚಂದ್ರ ಸಾಗರ್ ನೇತೃತ್ವದ 21 ಮಂದಿ ಸದಸ್ಯರ ಜಂಟಿ ಸದನ ಸಮಿತಿ BIALನ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಕೆಂಪೇಗೌಡರ ಹೆಸರಿಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಒದಗಿಸುವುದು ಮತ್ತು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕುವುದು ಹಾಗೂ ಎಚ್ಎಎಲ್ ನಿಲ್ದಾಣಕ್ಕೆ ಮರುಚಾಲನೆ ನೀಡಬೇಕು ಎಂದು ಕೂಡಾ ಹೇಳಲಾಗಿತ್ತು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ 500 ವಾರ್ಷಿಕೋತ್ಸವ ಸಂದರ್ಭದಲ್ಲಿ ಬಿಐಎಎಲ್ ಮರುನಾಮಕರಣ ಮಾಡಲು ಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ತುಮಕೂರಿನಿಂದ ಬೆಂಗಳೂರಿನ ತನಕ 64 ಕಿ.ಮೀ. ಉದ್ದದ ನ್ಯಾಷನಲ್ ಹೈವೇಗೆ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.












Click it and Unblock the Notifications