ತ.ನಾಡಿಗೆ 12 ಟಿಎಂಸಿ ಕಾವೇರಿ ನೀರು ಬಿಡಲೇಬೇಕೆಂದ ಸಿಎಂಸಿ

ಈ ಆದೇಶ ಕರ್ನಾಟಕದ ಜನತೆಗೆ, ಮೇಲಾಗಿ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಜನರಿಗೆ ಬರಸಿಡಿಲಿನಂತೆ ಎರಗಿದೆ. ಮೊದಲು ತಿಂಗಳಿಗೆ ಕನಿಷ್ಠ 6 ಟಿಎಂಸಿ ಕಾವೇರಿ ನೀರನ್ನು ಬಿಡಬೇಕೆಂದು ಇದ್ದ ಆದೇಶವನ್ನು ದುಪ್ಪಟ್ಟು ಮಾಡಿರುವ, ಪ್ರಧಾನಿ ಮನನೋಹನ ಸಿಂಗ್ ನೇತೃತ್ವದ ಸಿಎಂಸಿ ಈ ತಿಂಗಳೊಳಗೆ 12 ಟಿಎಂಸಿ ನೀರನ್ನು ಬಿಡಬೇಕೆಂದು ಹೇಳಿ, ಕರ್ನಾಟಕಕ್ಕೆ ಬರೆ ಎಳೆದಿದೆ.
ಶನಿವಾರ ಸಂಜೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕ ಈ ಬಾರಿ ಭಾರೀ ಬರ ಎದುರಿಸಿದೆ, ನಿರೀಕ್ಷೆಗೆ ತಕ್ಕಂತೆ ಮಳೆಯಾಗಿಲ್ಲ, ಅಗತ್ಯವಾದಷ್ಟು ನೀರು ಕೂಡ ಕೆಆರ್‌ಎಸ್‌ನಲ್ಲಿ ಶೇಖರಣೆಯಾಗಿಲ್ಲ, ಹಾಗಾಗಿ ನೀರು ಬಿಡುವುದು ಸಾಧ್ಯವಿಲ್ಲ ಎಂಬ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಎಂಸಿ ನೀಡಿಲ್ಲ.
ಇಂದಿನ ಸಭೆಯ ವರದಿಯನ್ನು ಸೋಮವಾರ ಸುಪ್ರೀಂಕೋರ್ಟಿಗೆ ಸಿಎಂಸಿ ಸಲ್ಲಿಸಲಿದ್ದು, ಮುಂದಿನ ತೀರ್ಮಾನವನ್ನು ಸರ್ವೋಚ್ಚ ನ್ಯಾಯಾಲಯ ತೆಗೆದುಕೊಳ್ಳಲಿದೆ. ಸುಪ್ರೀಂಕೋರ್ಟ್ ಕೂಡ ಸಿಎಂಸಿ ನೀಡಿರುವ ವರದಿಯ ಆಧಾರದ ಮೇಲೆ ತೀರ್ಮಾನ ನೀಡಲಿರುವುದು ಕರ್ನಾಟಕದ ಜನತೆಗೆ ಭಾರೀ ತಲೆನೋವು ತಂದಿದೆ.
ರಾಜ್ಯವೇ ಹೊಣೆ : ಈ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗಿದೆ. ಸುಪ್ರೀಂಕೋರ್ಟ್ ಮತ್ತು ಪ್ರಧಾನಿ ಮಾತು ಕೇಳದಿದ್ದರೂ ಸರಿ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿ ಸರಕಾರ ಬಿದ್ದುಹೋದರೂ ಸರಿ ತಮಿಳುನಾಡಿಗೆ ಒಂದು ಹನಿ ನೀರನ್ನೂ ರಾಜ್ಯ ಬಿಡಬಾರದು. ಇಂಥ ದಿಟ್ಟ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ತಲೆದೋರಿದರೆ ರಾಜ್ಯ ಸರಕಾರವೇ ಹೊಣೆಯಾಗಲಿದೆ ಎಂದು ರೈತರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಶನಿವಾರ ಮಂಡ್ಯ ಬಂದ್ : ಈಗಾಗಲೆ ಶನಿವಾರ ಮಂಡ್ಯ ಬಂದ್ ಮಾಡುವುದಾಗಿ ರೈತರ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. ಸಿಎಂಸಿಯ ಈ ನಿರ್ಧಾರದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ, ರೈಲು ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಮತ್ತಷ್ಟು ನೀರು ಬಿಟ್ಟಿದ್ದೇ ಆದಲ್ಲಿ, ಕೆಆರ್‌ಎಸ್‌ನಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಿದ್ದರೂ, ಅದನ್ನು ಧಿಕ್ಕರಿಸಿ ಕೆಆರ್‌ಎಸ್ ಡ್ಯಾಂ ಮುತ್ತಿಗೆ ಹಾಕಲು ರೈತರು ತೀರ್ಮಾನಕ್ಕೆ ಬಂದಿದ್ದಾರೆ.












Click it and Unblock the Notifications