ನನಗೂ ಮುಖ್ಯಮಂತ್ರಿಯಾಗೋ ಆಸೆ ಉಂಟು

ಕನಸು ಕಾಣಲು ಯಾವುದೇ ತೆರಿಗೆ ಕಟ್ಟ ಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ರವಿ ಹೇಳಿದರು.
ಸಿ.ಟಿ.ರವಿ ಮುಖ್ಯಮಂತ್ರಿಯಾಗುವ ಹಗಲು ಗನಸು ಕಾಣುತ್ತಿದ್ದಾರೆ ಎಂಬ ಕೆಜೆಪಿ ರಾಜ್ಯಾಧ್ಯಕ್ಷ ಧನಂಜಯಕುಮಾರ್ ಅವರು ಇತ್ತೀಚೆಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕನಸು ಕಾಣದ ವ್ಯಕ್ತಿ ಯಾರೂ ಇಲ್ಲ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕನಸು ಇದ್ದೇ ಇರುತ್ತದೆ. ಅದರಂತೆ ತಮಗೂ ಮುಖ್ಯಮಂತ್ರಿ ಯಾಗಬೇಕೆಂಬ ಕನಸು ಇದೆ. ಆದರೆ ಮುಖ್ಯಮಂತ್ರಿಯಾಗಲು ಈಗಿನ್ನೂ ಕಾಲ ಬಂದಿಲ್ಲ ಎಂದು ಹೇಳಿದರು.
ಸೋಲುವ ಭೀತಿಯಿಂದ ವಿಕಾಸಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂಬ ವಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಾವು ಮತದಾನದ ಹಕ್ಕನ್ನು ಪಡೆಯುವ ಮುನ್ನ ಅಂದರೆ 13ನೇ ವಯಸ್ಸಿನಲ್ಲಿಯೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿದರು.
ಆಗ ಶಾಸಕನಾಗುವ ಅರ್ಹತೆ ತಮಗಿರಲಿಲ್ಲ. ಆ ನಂತರ 21ನೇ ವಯಸ್ಸಿನಲ್ಲಿ ಯಡಿಯೂರಪ್ಪ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡ ರವಿ, ವೈಚಾರಿಕ ಚಿಂತನೆ ಹೊಂದಿರುವವರಿಗೆ ಸೋಲಿನ ಭೀತಿ ಇರುವುದಿಲ್ಲ. ಜನತೆಯ ಆಶೀರ್ವಾದ ತಮ್ಮ ಮೇಲೆ ಇರುವವರೆಗೂ ಸೋಲುವ ಮಾತೇ ಇಲ್ಲ ಎಂದರು.
ಸಿ.ಟಿ.ರವಿ ಹಗಲುಗನಸು: ಸಚಿವ ಸಿ.ಟಿ.ರವಿ ಅವರು ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ದೊಡ್ಡವನಾಗಬಹುದು ಎಂಬ ಹಗಲುಗನಸು ಕಾಣುತ್ತಿದ್ದಾರೆ. ಅವರಿಗೆ ಮತ್ತೆ ಅಧಿಕಾರ ಸಿಗುವುದು ಕನಸಿನ ಗಂಟು. ಕ್ಷೇತ್ರದ ಜನತೆ ಅವರಿಂದ ಭ್ರಮನಿರಸನಗೊಂಡಿದ್ದಾರೆ. ಅವರು ಸಚಿವರಾಗುವುದಿರಲಿ, ಶಾಸಕರೂ ಆಗುವುದಿಲ್ಲ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ಸಚಿವ ಸಿ.ಟಿ.ರವಿ ನಮ್ಮ ದೃಷ್ಟಿಯಲ್ಲಿ ಬಹಳ ಚಿಕ್ಕವರು. ಅವರಿಗಿನ್ನೂ ಬುದ್ದಿ ಬೆಳೆಯಬೇಕಿದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ಪಕ್ಷವೇ ಯಡಿಯೂರಪ್ಪ ಅವರನ್ನು ಬೆಳೆಸಿದೆ ಎಂದು ರವಿ ಮಾತನಾಡುತ್ತಾರೆ.
1980ರ ಮೊದಲು ಬಿಜೆಪಿ ಅಸ್ಥಿತ್ವದಲ್ಲಿಯೇ ಇರಲಿಲ್ಲ. ಅಂದು ಪಕ್ಷ ಕಟ್ಟಿದವರು ಯಾರು ಎಂಬುದನ್ನು ರವಿ ಹೇಳಬೇಕು. ಸಚಿವರಾಗಲು ರವಿ ಎಷ್ಟು ಬಾರಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ.
ಸಿ.ಟಿ.ರವಿಯನ್ನು ರಾಜಕೀಯವಾಗಿ ಬೆಳೆಸಿದ್ದೇ ಯಡಿಯೂರಪ್ಪ. ಅವರ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಕೆಜೆಪಿಯ ಯುವಕರು ಸಿಡಿದೇಳುತ್ತಾರೆ. ಮುಂದೆ ಆಗುವ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ ಎಂದು ಧನಂಜಯ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications