ಮೈಯಲ್ಲಿ ನಡುಕವನ್ನೆಬ್ಬಿಸಿದ್ದ ಬಾಲಕನ ಭೀಕರ ಹತ್ಯೆ

ವಿಪರ್ಯಾಸದ ಮತ್ತು ಆಘಾತಕರ ಸಂಗತಿಯೆಂದರೆ, ಆ ಅಪ್ರಾಪ್ತ ವಯಸ್ಕ ಬಾಲಕನನ್ನು ಹತ್ಯೆ ಮಾಡಿದ್ದು ಅವನ ಮನೆಯಲ್ಲಿಯೇ ಇದ್ದ ಮತ್ತೊಬ್ಬ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಪಕ್ಕದ ಮನೆಯಲ್ಲಿದ್ದ ಆತನ ಸ್ನೇಹಿತ. ಇಬ್ಬರೂ ಕಳ್ಳತನ ಮಾಡುತ್ತಿದ್ದುದನ್ನು ಕೊಲೆಯಾದ 9 ವರ್ಷದ ಬಾಲಕ ನೋಡಿದ್ದ.
ಹತ್ಯೆಯಾಗಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದ ಭೀಮರಾಯ ಎಂಬಾತ. ಈತನ ಕೊಲೆ ನ.26ರಂದು ನಡೆದಿತ್ತು. ಕೊಲೆಯನ್ನು ಎಷ್ಟು ಭೀಕರವಾಗಿ ಮಾಡಲಾಗಿತ್ತೆಂದರೆ, ಬಾಲಕನ ಮುಖದ ಮೇಲೆ ಸೈಜುಗಲ್ಲನ್ನು ಎತ್ತಿಹಾಕಿ ಗುರುತು ಸಿಗಲಾರದಂತೆ ಮಾಡಿದ್ದರು ಹದಿನೈದು ವರ್ಷದೊಳಗಿನ ಬಾಲಕರು. ಕೊಲೆ ಮಾಡಿದ ಪರಿ ನೋಡಿದವರ ಮೈ ನಡುಗುವಂತೆ ಮಾಡಿತ್ತು.
ಭೀಮರಾಯ ನೆಲೋಗಿಯಲ್ಲಿನ ತನ್ನ ಅಜ್ಜಿಯ ಮನೆಯಲ್ಲಿ ವಾಸಿರುತ್ತಿದ್ದ. ಭೀಮರಾಯನ ಸೋದರಮಾವನಿಗೆ ಸೇರಿದ 150 ರು.ಯನ್ನು ಬಾಲಕರಾದ ಭೀಮ ಕಾಂಬ್ಳಿ ಮತ್ತು ಪಕ್ಕದ ಮನೆಯ ವೀರು ಎಂಬಿಬ್ಬರು ಕದಿಯುತ್ತಿದುದನ್ನು ಭೀಮರಾಯ ನೋಡಿದ್ದ. ಇದನ್ನು ಮನೆಯವರಿಗೆ ಹೇಳುವುದಾಗಿ ಎಚ್ಚರಿಕೆ ನೀಡಿದ್ದ. ಅವನು ನೀಡಿದ್ದ ಎಚ್ಚರಿಕೆಯೇ ಆತನ ಜೀವಕ್ಕೆ ಮುಳುವಾಯಿತು.
ಭೀಮರಾಯನನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋದ ಕೊಲೆಗಡುಕರಿಬ್ಬರು ಮೊದಲು ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಆತ ಅವರ ದಾರಿಗೆ ಬಾರದಿದ್ದಾಗ, ಸೈಜುಗಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದರು. ನಂತರ ಮನೆಯಲ್ಲಿನ ಯಾರಿಗೂ ತಿಳಿಯಬಾರದೆಂದು ಮತ್ತು ಪೊಲೀಸರಿಗೆ ಅನುಮಾನ ಬರಬಾರದೆಂದು ಮನೆಗೆ ಮರಳಿದವರೇ ಸ್ನಾನ ಮಾಡಿದ್ದರು.
ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದಾಗ ಅವರಿಬ್ಬರು ಹೊತ್ತಿಲ್ಲದ ಹೊತ್ತಿನಲ್ಲಿ ಸ್ನಾನ ಮಾಡಿದ ಸಂಗತಿ ಬಹಿರಂಗವಾಗಿದೆ. ಹುಡುಗರಿಬ್ಬರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಶ್ವಾನದಳ ಬಂದರೆ ಅದಕ್ಕೆ ವಾಸನೆ ಸಿಗಬಾರದೆಂದು ಹತ್ಯೆ ಮಾಡಿದ ನಂತರ ಸ್ನಾನ ಮಾಡಿದ್ದಾಗಿ ತಿಳಿಸಿದ್ದಾರೆ. ಈಗ ಅವರಿಬ್ಬರನ್ನು ಬಾಲಾಪರಾಧಿಗಳ ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ.












Click it and Unblock the Notifications