9 ಸಬ್ಸಿಡಿ ಸಿಲಿಂಡರ್ ಪೂರೈಕೆ ಇನ್ನು ದೂರದ ಮಾತು

ಪಿ ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದರೆ ಪ್ರತಿ ಕುಟುಂಬಕ್ಕೆ ನಿಗದಿ ಮಾಡಲಾಗಿರುವ ಸಬ್ಸಿಡಿ ಸಹಿತ ಸಿಲಿಂಡರ್ ಮಿತಿಯನ್ನು 9ಕ್ಕೆ ಏರಿಸಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರು ಹತಾಶರಾಗಿ ಹೇಳಿದ್ದಾರೆ.
ವಾರ್ಷಿಕ 6 ಸಿಲಿಂಡರ್‌ಗಳ ಮಿತಿಯನ್ನು 9ಕ್ಕೆ ಏರಿಸಿದರೆ ಅದರಿಂದ ತೈಲ ಕಂಪನಿಗಳಿಗೆ 3,000 ಕೋಟಿ ರೂ. ಹೊರೆ ಬೀಳುತ್ತದೆ. ಈ ಹೊರೆಯನ್ನು ಭರಿಸಲು ಹಣಕಾಸು ಸಚಿವಾಲಯ ಸಮ್ಮತಿ ನೀಡಿದರೆ 9 ಸಿಲಿಂಡರ್ ನೀಡಬಹುದು ಎಂಬ ಮಾತನ್ನು ತೈಲ ಕಂಪನಿಗಳು ಆಡಿವೆ. ಆದರೆ 2012-13 ಸಾಲಿಗೆ ಸಬ್ಸಿಡಿ ನೀಡುವ ಕುರಿತು ಚಿದಂಬರಂ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಮೊಯ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಒಂದು ಲೆಕ್ಕಾಚಾರದ ಪ್ರಕಾರ ಚಿದು ಸಚಿವಾಲಯ 3,000 ಕೋಟಿ ರೂ. ನೀಡುವುದು ಹಾಗಿರಲಿ ಸಬ್ಸಿಡಿ ಬಾಬತ್ತಿನಲ್ಲಿ ಬಿಡಿಗಾಸು ನೀಡಲೂ ವಿತ್ತ ಸಚಿವಾಲಯದಲ್ಲಿ ಹಣವಿಲ್ಲ. ಹಾಗಾಗಿ ಸಬ್ಸಿಡಿ ದರದಲ್ಲಿ 9 ಸಿಲಿಂಡರ್ ಸರಬರಾಜು ಆಗುವುದು ಇನ್ನು ಕನಸಿನ ಮಾತು ಎಂದು ಸಚಿವಾಲಯದ ಮೂಲಗಳು ಪಿಸುಗುಟ್ಟಿವೆ.
ಇದಲ್ಲದೆ ಡೀಸೆಲ್ ಮತ್ತು ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುತ್ತಿರುವುದರಿಂದ ತೈಲ ಕಂಪನಿಗಳು ಪ್ರಸ್ತುತ ಪ್ರತಿದಿನವೂ 400 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ 9/12 ಸಿಲಿಂಡರುಗಳ ಪೂರೈಕೆಗೆ ಕಂಪನಿಗಳು ಅಂಕಿತವಾಗುವುದು ದುಸ್ತರವಾಗಿದೆ.
ಗಮನಾರ್ಹವೆಂದರೆ ದೇಶದಲ್ಲಿ ಅರ್ಧದಷ್ಟು ಕುಟುಂಬಗಳು ವರ್ಷದಲ್ಲಿ 6 ಸಬ್ಸಿಡಿ ಸಿಲಿಂಡರುಗಳಷ್ಟೇ ಬಳಕೆ ಮಾಡಿದರೆ ಇನ್ನರ್ಧ ಕುಟುಂಬಗಳಿಗೆ ಹೆಚ್ಚುವರಿಯಾಗಿ 3-6 ಸಿಲಿಂಡರುಗಳ ಅಗತ್ಯವಿದೆ.












Click it and Unblock the Notifications