ಬಿಬಿಎಂಪಿ ಸದಸ್ಯ ಗೋವಿಂದರಾಜುಗೆ 4 ವರ್ಷ ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್, ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 7 ಹಾಗೂ 13 ರ ಅಡಿಯಲ್ಲಿ ಆರೋಪ ಸಾಬೀತಾಗಿದೆ. ಸರ್ಕಾರಿ ಹುದ್ದೆಯಲ್ಲಿರುವವರು ಸಾರ್ವಜನಿಕರ ಹಕ್ಕು ರಕ್ಷಿಸಬೇಕು.
ಅದು ಬಿಟ್ಟು ಗೂಂಡಾಗಿರಿ ವರ್ತನೆ ಮಾಡುವುದು ಸರಿಯಲ್ಲ. ಇದು ಬೇರೆಯವರಿಗೆ ಪಾಠವಾಗಬೇಕು. ಈ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ದಂಡದ ಮೊತ್ತ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಕೋರ್ಟ್ ಎಚ್ಚರಿಸಿದೆ.
ಪದ್ಮನಾಭನಗರ ಅಸೆಂಬ್ಲಿ ಕ್ಷೇತ್ರದಲ್ಲಿರುವ ಗಣೇಶ ಮಂದಿರ ಬಿಬಿಎಂಪಿ ವಾರ್ಡ್ (ನಂ.165) ನ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಗುತ್ತಿಗೆದಾರರೊಬ್ಬರಿಂದ 2 ಲಕ್ಷ ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.
ಶಾಸಕರ ಭವನದಲ್ಲಿ ಕೆಜಿಎಫ್ ಶಾಸಕ ವೈ ಸಂಪಂಗಿ ಸಜೆ ಅನುಭವಿಸಿದ ನಂತರ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಬಿಬಿಎಂಪಿ ಸದಸ್ಯರಾಗಿದ್ದ ಜಗದೀಶ್ ಅವರು ಜೈಲು ಪಾಲಾಗಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬಿಬಿಎಂಪಿ ಸದಸ್ಯರೊಬ್ಬರನ್ನು ಲೋಕಾಯುಕ್ತ ನ್ಯಾಯಾಲಯ ಜೈಲಿಗೆ ಕಳುಹಿಸುತ್ತಿದೆ.
4 ವರ್ಷ ಕಠಿಣ ಶಿಕ್ಷೆ, 90 ಸಾವಿರ ರು ದಂಡ ವಿಧಿಸಿರುವ ಲೋಕಾಯುಕ್ತ ಕೋರ್ಟ್ ಆದೇಶ ಪ್ರಶ್ನಿಸಿ ಗೋವಿಂದರಾಜು ಪರ ವಕೀಲರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಪ್ರಕರಣದ ಹಿನ್ನೆಲೆ: ಕತ್ರಿಗುಪ್ಪೆಯಲ್ಲಿ ಉದಯ್ ಕುಮಾರ್ ಎಂಬುವವರು ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆದು ಬಹುಮಹಡಿ ನಿರ್ಮಿಸುತ್ತಿದ್ದರು. ಗೋವಿಂದರಾಜು ಸದಸ್ಯರಾದ ನಂತರ ಕಟ್ಟಡ ಪರಿಶೀಲಿಸಿದ್ದರು. ನಕ್ಷೆ ಮತ್ತು ಬೈಲಾ ಉಲ್ಲಂಘಿಸಲಾಗಿದೆ ಎಂದು ಹೇಳಿ ನಿರ್ಮಾಣ ಸ್ಥಗಿತಕ್ಕೆ ಆದೇಶಿಸಲಾಗಿತ್ತು.
ಕಾಮಗಾರಿ ಮುಂದುವರಿಯಬೇಕಾದರೆ 8 ಲಕ್ಷ ರುಪಾಯಿಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, 5 ಲಕ್ಷ ರುಪಾಯಿಗೆ ಡೀಲ್ ಕುದುರಿತ್ತು. ತಿಂಗಳ ಹಿಂದೆ ಉದಯ್ ಕುಮಾರ್ ಅವರು ಗೋವಿಂದರಾಜು ಅವರಿಗೆ 2 ಲಕ್ಷ ರುಪಾಯಿಗಳನ್ನು ನೀಡಿದ್ದರು.
ಉಳಿದ ಹಣ ನೀಡುವಂತೆ ಉದಯ್ ಕುಮಾರ್ ಅವರಿಗೆ ಗೋವಿಂದರಾಜು ಪದೆಪದೇ ದೂರವಾಣಿ ಮಾಡುತ್ತಿದ್ದರು. ಇದರಿಂದ ಬೇಸತ್ತ ಉದಯ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ನಂತರ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ತಂಡ ದಾಳಿ ನಡೆಸಿ ಬಿಬಿಎಂಪಿ ಸದಸ್ಯ ಗೋವಿಂದರಾಜು ಅವರನ್ನು ಜುಲೈ 17, 2010 ರಂದುಲಂಚ ಸ್ವೀಕರಿಸುವಾಗ ಹಿಡಿದಿದ್ದರು.












Click it and Unblock the Notifications