6ನೇ ಬಾರಿ ರೆಡ್ಡಿ ಜಾಮೀನು ಅರ್ಜಿ ವಜಾ

ಓಎಂಸಿ ಪ್ರಕರಣ ಸಂಬಂಧ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐನಿಂದ ಬಳ್ಳಾರಿಯಲ್ಲಿ ಬಂಧಿತರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಜಾಮೀನು ಕೋರಿ ಸಲ್ಲಿಸಿದ್ದ 6ನೇ ಅರ್ಜಿಯನ್ನು ಕೂಡ ಕೋರ್ಟ್ ಸೋಮವಾರ(ನ.27) ತಿರಸ್ಕರಿಸಿದೆ.
ಚಂಚಲಗೂಡ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರೆಡ್ಡಿ, ಮುಂದಿನ ವರ್ಷ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಭಾಗವಹಿಸುವ ಸಲುವಾಗಿ ಜಾಮೀನು ನೀಡಬೇಕೆಂದು ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನನ್ನ ಕಕ್ಷಿದಾರ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ. ರೆಡ್ಡಿಗೆ ಜಾಮೀನು ನೀಡುವುದು ಬೇಡ. ರೆಡ್ಡಿ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಎಂಬ ಸಿಬಿಐ ವಾದದಲ್ಲಿ ಅರ್ಥವಿಲ್ಲ. ಹಾಗಾಗಿ ರೆಡ್ಡಿ ಅವರಿಗೆ ಜಾಮೀನು ನೀಡಿ' ಎಂದು ರೆಡ್ಡಿ ವಕೀಲರು ಗುರುವಾರ(ನ.23) ಸಿಬಿಐ ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ಆದರೂ, ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದ್ದು ರೆಡ್ಡಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಹಾಗಾಗಿ ಜಾಮೀನು ನೀಡಬಾರದು ಎಂದು ನ್ಯಾಯಾಲಯದಲ್ಲಿ ಸಿಬಿಐ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತು. ಜನಾರ್ಧನ ರೆಡ್ಡಿ, ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದಾರೆ.












Click it and Unblock the Notifications