ಟ್ರಾವೆಲ್ಸ್ ಮಾಲೀಕ ನಿಗೂಢ ರೀತಿ ಸಾವು

ಮೃತಪಟ್ಟ ವ್ಯಕ್ತಿಯನ್ನು ಮಹಾಲಕ್ಷ್ಮಿ ಲೇಔಟ್ ನಿವಾಸಿ ಅಂಬಾಸಿಡರ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಶಂಕರ್ ಎಂದು ಗುರುತಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಕಳೆದ ಎರಡು ದಿನದಿಂದ ನಗರದ ಬೇರೆ ಬೇರೆ ಕಡೆಗಳಲಿ ಲೋಕಲ್ ಟ್ರಿಪ್ ಎಂದು ಶಂಕರ್ ತೆರಳಿದ್ದರು ಎಂದು ತಿಳಿದು ಬಂದಿದೆ.
ಕಳೆದ ವಾರ 65 ವರ್ಷ ವಯಸ್ಸಿನ ಶಂಕರ್ ಅವರ ಕಾರನ್ನು ವಿದೇಶಿಯರು ಬಾಡಿಗೆಗೆ ಪಡೆದಿದ್ದರು. ನಂತರ ಗರುಡಾಚಾರ್ ಪಾಳ್ಯದ ಬಳಿ ಬಂದು ನಿಂತ ಕಾರು ಕಳೆದ ಎರಡು ದಿನಗಳಿಂದ ನಿಂತಲ್ಲೇ ನಿಂತಿತ್ತು.
ಕಾರಿನಿಂದ ದುರ್ವಾಸನೆ ಬರಲು ಆರಂಭಿಸಿ, ರಕ್ತ ಸೋರಿಕೆ ಕಂಡು ಬಂದ ಮೇಲೆ ಸ್ಥಳೀಯರಿಗೆ ಶವ ಇರುವುದು ಪತ್ತೆಯಾಗಿದೆ.
ಮಂಗಳವಾರ ಬೆಳಗ್ಗೆ ಆಗಮಿಸಿದ ಪೊಲೀಸರು ಕಾರಿನ ಗಾಜು ಒಡೆದು ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಕಾರಿನಲ್ಲಿ ಆಸ್ತಮಾ ರೋಗಕ್ಕೆ ಸಂಬಂಧಪಟ್ಟ ಔಷಧಿಗಳು ಸಿಕ್ಕಿದೆ.
ಶಂಕರ್ ಅವರು ಆಸ್ತಮಾ ರೋಗಿ ಇರಬಹುದು ಎಂದು ತಿಳಿದು ಬಂದಿದೆ. ಕಾರಿನಲ್ಲಿ ಉಸಿರುಗಟ್ಟಿ ಸತ್ತಿರಬಹುದು ಅಥವಾ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ಮರನೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ತನಿಖೆ ಮುಂದುವರೆದಿದೆ ಎಂದು ಮಹದೇವಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಾಗರಾಜ್ ಹೇಳಿದ್ದಾರೆ.
ಇಂಥದ್ದೇ ಪ್ರಕರಣ: ವೈಟ್ ಫೀಲ್ಡ್ ನಲ್ಲಿರುವ ಪ್ರತಿಷ್ಠಿತ ಕಂಪನಿ ಎಚ್ ಪಿಯಲ್ಲಿ ಉದ್ಯೋಗಿಯಾಗಿದ್ದ ಕೇರಳದ ಕಲ್ಲಿಕೋಟೆ ಮೂಲದ ಶ್ರೀರಾಜು ಎಇಸಿಎಸ್ ಲೇಔಟ್ ನಲ್ಲಿ ಮೇ ತಿಂಗಳಿನಲ್ಲಿ ವಿಚಿತ್ರ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು.
ಕೇವಲ ಎಸ್ ಎಸ್ ಎಲ್ ಸಿ ಓದಿರುವ ಎಲಿಜಬೆತ್, ತಾನು ಎಂಬಿಎ ಓದಿದ್ದೇನೆ. ಐಬಿಎಂನಲ್ಲಿ ಉದ್ಯೋಗ ಎಂದು ಹೇಳಿಕೊಂಡು ರಾಜುವನ್ನು ಬಲೆಗೆ ಹಾಕಿಕೊಂಡಿದ್ದಳು. ಟೆಲಿ ಕಾಲರ್ ಆಗಿ ಮಧುರ ದನಿ ಹೊಂದಿದ್ದ ಎಲ್ಸಿ(ಎಲಿಜಬೆತ್) ಹುಡುಗಾಟಕ್ಕೆ ರಾಜು ಜೊತೆ ಮಾತುಕತೆಗೆ ಇಳಿದು ರಾಜುವನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡು ಕೈ ಕೊಟ್ಟ ಹಿನ್ನೆಲೆಯಲ್ಲಿ ಟೆಕ್ಕಿ ರಾಜು ವಿಚಿತ್ರವಾಗಿ ತನ್ನ ಜೀವನಕ್ಕೆ ಅಂತ್ಯ ಹಾಡಿಕೊಂಡು ಬಿಟ್ಟಿದ್ದ.
ಈ ಪ್ರಕರಣವನ್ನು ಬೇಧಿಸಿದ ಮಹದೇವಪುರ ಠಾಣೆ ಪೊಲೀಸರನ್ನು ಶ್ಲಾಘಿಸಿದ ಎಸಿಪಿ ನರಸಿಂಹಯ್ಯ ಅವರು ಟ್ರಾವೆಲ್ಸ್ ಮಾಲೀಕ ಶಂಕರ್ ಪ್ರಕರಣವೂ ಆದಷ್ಟು ಬೇಗ ಮುಕ್ತಾಯ ಹಾಡುವ ನಿರೀಕ್ಷೆ ಹೊಂದಿದ್ದಾರೆ.












Click it and Unblock the Notifications