ಬಿಜೆಪಿ ಬಿಡಲ್ಲ, ಕೆಜೆಪಿ, ಕಾಂಗ್ರೆಸ್ ಸೇರಲ್ಲ: ಸೋಮಣ್ಣ
ಬೆಂಗಳೂರು, ನ.27: ಬಿಜೆಪಿ ಹಾಗೂ ಕೆಜೆಪಿ ಕದನದಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಹವಣಿಸಿದೆ. ಇದಕ್ಕಾಗಿ ಸಚಿವ ಸೋಮಣ್ಣ ಅವರಿಗೆ ಗಾಳ ಹಾಕಿದೆ. ಇದು ಸಾಧ್ಯವೇ ಇಲ್ಲ 'ಸೋಮಣ್ಣ ಅವರು ಕೆಜೆಪಿ ಸೇರುತ್ತಾರೆ' ಎಂಬ ಎಲ್ಲಾ ಸುದ್ದಿಗಳಿಗೆ ಮಂಗಳವಾರ(ನ.27) ಕೊಂಚ ಭಾವುಕರಾಗೇ ವಸತಿ ಸಚಿವ ಸೋಮಣ್ಣ ಅವರುಸ್ಪಷ್ಟನೆ ನೀಡಿದ್ದಾರೆ.
ಅಪರೇಷನ್ ಕಮಲ ಮಾದರಿ ತಿರುಮಂತ್ರ, ಪ್ರತಿತಂತ್ರವನ್ನು ಹೆಣೆಯಲು ಕೆಪಿಸಿಸಿ ಸಿದ್ಧತೆ ನಡೆಸಿದೆ ಎಂಬ ಸುದ್ದಿಯಿದೆ. ಆದರೆ, ಮೂಲ ಕಾಂಗ್ರೆಸ್ಸಿಗರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ದೊಡ್ಡ ತಲೆನೋವಾಗಿದೆ. ಸೋಮಣ್ಣ ಸೇರ್ಪಡೆ ಇನ್ನೇನು ಖಚಿತ ಎಂಬ ಸುದ್ದಿ ದಟ್ಟವಾಗುತ್ತಿದ್ದಂತೆ ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ತೊರೆಯುತ್ತಿದ್ದಂತೆ ಸಚಿವರಾದ ವಿ. ಸೋಮಣ್ಣ, ಆನಂದ್ ಅಸ್ನೋಟಿಕರ್, ರಾಜೂಗೌಡ ಸೇರಿದಂತೆ ಒಟ್ಟು 15 ಮಂದಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ನಾಯಕರು ಹೈಕಮಾಂಡ್‌ಗೆ ಸುದ್ದಿ ಮುಟ್ಟಿಸಿದ್ದಾರೆ.
ಬಿಜೆಪಿ ಬಿಡಲ್ಲ ಎಂದ ಸೋಮಣ್ಣ: ಆದರೆ, ಮಂಗಳವಾರ (ನ.27) ಮಾತನಾಡಿದ ಸಚಿವ ಸೋಮಣ್ಣ ಅವರು ತಾವು ಯಾವುದೇ ಪಕ್ಷದ ಮುಖಂಡ ಬಳಿ ಮಾತುಕತೆ ನಡೆಸಿಲ್ಲ. ಬಿಜೆಪಿ ತೊರೆಯುವುದು ಕನಸಿನ ಮಾತು. ನಾನು ಯಡಿಯೂರಪ್ಪ ಅವರ ಬೆಂಬಲಿಗ ನಿಜ.
ಆದರೆ, ಬಿಜೆಪಿ ಬಿಡುವುದಿಲ್ಲ.ಕೆಜೆಪಿ ಸೇರುತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.
ಯಡಿಯೂರಪ್ಪ ಅವರಂತೆ ವೀರಶೈವ ಜನಾಂಗದ ಪ್ರಮುಖ ನಾಯಕರಾದ ವಿ ಸೋಮಣ್ಣ ಅವರು ಈಗ ದ್ವಂದ್ವ ಸ್ಥಿತಿ ಎದುರಿಸುತ್ತಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿತ್ತು. ಯಡಿಯೂರಪ್ಪ ಅವರನ್ನು ಬಿಟ್ಟಿರಲಾರದೆ, ಬಿಜೆಪಿ ತೊರೆದರೆ ರಾಜಕೀಯ ಭವಿಷ್ಯ ಅತಂತ್ರಗೊಳ್ಳುವ ಸ್ಥಿತಿ ಊಹಿಸಿಕೊಳ್ಳಲಾರದೆ ಸೋಮಣ್ಣ ಪರಿತಪಿಸುತ್ತಿರುವುದಂತೂ ನಿಜ.
ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ವಿರೋಧ: ಸಚಿವ ವಿ.ಸೋಮಣ್ಣ ಅವರ ಸೇರ್ಪಡೆಯನ್ನು ಬೆಂಗಳೂರಿನ ಬಹುತೇಕ ಶಾಸಕರು ಸ್ವಾಗತಿಸಿದ್ದಾರೆ. ಆದರೆ, ಅವರ ಪ್ರತಿಸ್ಪರ್ಧಿ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮಣ್ಣ ಕಾಂಗ್ರೆಸ್ ಸೇರಿದರೆ ಮತ್ತೊಮ್ಮೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳುತ್ತಾರೆ ಎಂಬ ಸುದ್ದಿ ಸಿಕ್ಕ ನಂತರ ಅದೇ ಕ್ಷೇತ್ರ ಹಾಲಿ ಶಾಸಕ ಪ್ರಿಯಕೃಷ್ಣ ಗರಂ ಆಗಿದ್ದಾರೆ.
ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಸಮಸ್ಯೆ ಬಗೆಹರಿದರೆ ಸೋಮಣ್ಣ ಸೇರ್ಪಡೆ ಖಚಿತ ಎನ್ನಲಾಗಿದೆ. ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡುವ ನಿಯಮ ಕಾಂಗ್ರೆಸ್ ನಲ್ಲಿ ಸದ್ಯಕ್ಕಂತೂ ಇಲ್ಲ. ಯುವ ನಾಯಕರಿಗೆ ಮಾತ್ರ ಆದ್ಯತೆ ಎಂದು ರಾಹುಲ್ ಗಾಂಧಿ ನಿಯಮ ಹೊರಡಿಸಿದ ಮೇಲೆ ಪ್ರಿಯಕೃಷ್ಣ ಅವರಿಗೆ ಗೋವಿಂದ ರಾಜ ಕ್ಷೇತ್ರ ಒಲಿಯುವ ಸಾಧ್ಯತೆ ಹೆಚ್ಚು. ಈ ಎಲ್ಲಾ ಲೆಕ್ಕಾಚಾರವನ್ನು ಅರಿತ ಸೋಮಣ್ಣ ಸದ್ಯಕ್ಕೆ ಬಿಜೆಪಿಯನ್ನೇ ನಂಬಿಕೊಂಡು ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications