ಶೋಭಾ ಕರಂದ್ಲಾಜೆ ನಿಷ್ಠೆ ಬಿಜೆಪಿಗೊ ಕೆಜೆಪಿಗೋ?

Will Shobha join KJP?
ಬೆಂಗಳೂರು, ನ. 26 : ಯಡಿಯೂರಪ್ಪನವರು ಡಿಸೆಂಬರ್ 9ರಂದು, ಸೋನಿಯಾ ಗಾಂಧಿ ಅವರ ಜನ್ಮದಿನ ಕರ್ನಾಟಕ ಜನತಾ ಪಕ್ಷವನ್ನು ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದ್ದಂತೆ ಭಾರತೀಯ ಜನತಾ ಪಕ್ಷದಲ್ಲಿ ಸಚಿವರಾಗಿ ಸಂಬಳ ಪಡೆಯುತ್ತಿರುವ ಎಷ್ಟು ಜನರು ಲಂಘನ ಮಾಡಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.

ಕೆಲವರು ತಮ್ಮ ನಿಷ್ಠೆ ಏನಿದ್ದರೂ ತಮ್ಮ ಅಧಿನಾಯಕ ಯಡಿಯೂರಪ್ಪನವರಿಗೆ ಎಂದು ಬಿಜೆಪಿಯಲ್ಲಿದ್ದುಕೊಂಡೇ ಘಂಟಾಘೋಷವಾಗಿ ಸಾರಿದ್ದರೆ, ಕೆಲವರು ಮಾತೃಪಕ್ಷವನ್ನು ಬಿಡುವುದಿಲ್ಲ ಎಂದು ದಿಟ್ಟತನ ತೋರಿದ್ದಾರೆ. ಇನ್ನು ಕೆಲವರು ಆ ಕಡೆಯೂ ಹೋಗಲಾರದೆ, ಈಕಡೆಯೂ ಇರಲಾರದೆ, ಬಾಯಿಯನ್ನೂ ಬಿಡಲಾರದೆ ಕಾದು ನೋಡುವ ತಂತ್ರ ಪ್ರಯೋಗಿಸುತ್ತಿದ್ದಾರೆ. ಇನ್ನು ಕೆಲವರು ಗಪ್ ಚಿಪ್.

ಹಾಗೆ ಗಪ್ ಚಿಪ್ ಆಗಿರುವವರಲ್ಲಿ ಪ್ರಮುಖರೆಂದರೆ, ಯಡಿಯೂರಪ್ಪನವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಇಂಧನ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ. ತಮ್ಮ ನಿಷ್ಠೆ ಎತ್ತಕಡೆ ಎಂದು ಅವರನ್ನು ಯಾರೂ ಕೇಳುವ ಅಗತ್ಯವೇ ಇಲ್ಲ, ಅವರು ಹೇಳುವ ಅಗತ್ಯವೂ ಬಂದಿಲ್ಲ. ಅದು ಎಲ್ಲರಿಗೂ ತಿಳಿದ ವಿಚಾರವೇ. ಯಾವುದೇ ಸಂದೇಹಗಳಿಗೆ ಅವಕಾಶ ನೀಡದೆ ಕೆಜೆಪಿಗೆ ಹಾರುವುದು ನಿಶ್ಚಿತ.

ಆದರೆ... ಬಿಜೆಪಿ ಸರಕಾರದಲ್ಲಿರುವ ಏಕೈಕ ಮಹಿಳಾ ಮಂತ್ರಿ ಮತ್ತು ಪ್ರಭಾವಶಾಲಿ ಶಾಸಕಿಯಾಗಿರುವ ಶೋಭಾ ಕರಂದ್ಲಾಜೆ ಬಿಜೆಪಿಯನ್ನು ತೊರೆದು ಕೆಜೆಪಿಗೆ ಜಿಗಿದರೆ ಯಾರಿಗೆ ನಷ್ಟ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆರ್ಎಸ್ಎಸ್ ಮತ್ತು ಎಬಿವಿಪಿಯ ಸಕ್ರೀಯ ಕಾರ್ಯಕರ್ತೆಯಾಗಿ ಹಂತಹಂತವಾಗಿ ಮೇಲೇರಿ ಬಂದಿರುವ ಶೋಭಾ ಬಿಜೆಪಿಯನ್ನು ತೊರೆದು ಆರ್‌ಎಸ್ಎಸ್ ಕೊಂಡಿಯನ್ನು ಕಳಚಿಕೊಳ್ಳಲು ಇಷ್ಟಪಡುವರೆ? ಇದು ಸ್ವಲ್ಪ ಕಷ್ಟದ ಕೆಲವೆ.

ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಏನಾದರೂ ಯಡಿಯೂರಪ್ಪನವರಿಗೆ ತಲೆಬಾಗಿದ್ದರೆ ಶೋಭಾ ಕರಂದ್ಲಾಜೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕೂಡ ರಾಜ್ಯದ ಚುಕ್ಕಾಣಿ ಹಿಡಿದವರಾಗುತ್ತಿದ್ದರು. ಅಂದು ಹೈಕಮಾಂಡ್ ಸರಿಯಾದ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರಿಂದ ಶೋಭಾ ಕೇವಲ ಮಂತ್ರಿಯಾಗಿ ಮುಂದುವರಿಯಬೇಕಾಯಿತು. ರಾಷ್ಟ್ರೀಯ ರಾಜಕಾರಣದಲ್ಲಿ ಕೂಡ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ವರಿಷ್ಠರು ಅವರಿಗೆ ವಾಗ್ದಾನ ನೀಡಿದ್ದರು. ಏನೇ ಆಗಲಿ, ಯುವನಾಯಕಿಯಾಗಿ ಶೋಭಾ ತಮ್ಮದೇ ಆದ ವರ್ಚಸ್ಸು ಹೊಂದಿರುವುದು ಮಾತ್ರ ಸುಳ್ಳಲ್ಲ.

ಒಂದು ವೇಳೆ ಕೆಜೆಪಿಯಿಂದ ಅವರು ಚುನಾವಣೆಗೆ ಇಳಿದರೂ ಯಾವ ಕ್ಷೇತ್ರದಿಂದ ಕಣಕ್ಕೆ ಧುಮುಕಲಿದ್ದಾರೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರದಿಂದ ಅವರು ಜಯಭೇರಿ ಬಾರಿಸಿದರೂ ಆ ಕ್ಷೇತ್ರಕ್ಕೆ ಅಂತಹ ಉಪಕಾರವೇನೂ ಮಾಡಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಅಡ್ಡಾಡುತ್ತಿವೆ. ಈ ಬಾರಿ ನಿಂತರೆ ಮತ್ತೆ ಗೆಲ್ಲುತ್ತಾರೆ ಎಂಬ ವಿಶ್ವಾಸವೂ ಕ್ರಮೇಣ ಕರಗುತ್ತಿದೆ. ಈ ಹಂತದಲ್ಲಿ ಕೆಜೆಪಿಗೆ ಅವರು ತೆರಳಿದರೆ ಅನೇಕ ಅವಕಾಶಗಳು ಅವರನ್ನು ಅರಸಿ ಬರಲಿವೆ.

ಬಲ್ಲ ಮೂಲಗಳ ಪ್ರಕಾರ, ಯಶವಂತಪುರವನ್ನು ತ್ಯಜಿಸಿ ಶೋಭಾ ಅವರು ಸುರೇಶ್ ಕುಮಾರ್ ಅವರ ಕ್ಷೇತ್ರ ರಾಜಾಜಿನಗರದಿಂದ ಸ್ಪರ್ಧಿಸಲಿದ್ದಾರೆ. ಅದು ಸಾಧ್ಯವಾಗದೇ ಇದ್ದರೆ ತಮ್ಮ ತವರೂರಾದ ಪುತ್ತೂರಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದೂ ಆಗಲಿಲ್ಲವೆಂದರೆ, ಉತ್ತರ ಕರ್ನಾಟಕದ ಯಾವುದೋ ಒಂದು ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಇದೆಲ್ಲದರ ಜೊತೆ ಮೈಸೂರು ಕೂಡ ಅವರ ಮನದಲ್ಲಿದೆ. ಹಿಂದೆ ಉಸ್ತುವಾರಿ ಸಚಿವೆಯಾಗಿದ್ದಾಗ ಮಾಡಿರುವ ಉತ್ತಮ ಕೆಲಸ ಅವರ ನೆರವಿಗೆ ಬರಲಿದೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಆದರೆ, ಇಂಥ ಯಾವುದೇ ಸುದ್ದಿಗಳಿಗೆ ಶೋಭಾ ಕರಂದ್ಲಾಜೆ ನಿಖರವಾದ ಉತ್ತರ ಹೇಳುತ್ತಿಲ್ಲ. ಕರ್ನಾಟಕ ಜನತಾ ಪಕ್ಷಕ್ಕೆ ಸೇರುವ ಬಗ್ಗೆ ಅವರು ತುಟಿ ಪಿಟ್ ಅನ್ನುತ್ತಿಲ್ಲ. ತಮಗೆ ವಹಿಸಿರುವ ಎರಡು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುವುದೇ ಸದ್ಯಕ್ಕೆ ತಮ್ಮ ಮುಂದಿರುವ ಕೆಲಸ ಎಂದು ಅವರು ಮುಗುಮ್ಮಾಗಿ ಹೇಳುತ್ತಿದ್ದಾರೆ. ಅವರು ಹಾಗೆ ಹೇಳುತ್ತಿದ್ದರೂ, ಡಿ.9ರಂದು ಅವರ ನಿಷ್ಠೆ ಯಾವ ಕಡೆ ವಾಲಲಿದೆ ಎಂಬುದು ಬಹಿರಂಗವಾಗಿರುವ ರಹಸ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+