ಬಿಜೆಪಿಗೆ ಯಡಿಯೂರಪ್ಪ ಗುಡ್ ಬೈ, ಮುಹೂರ್ತ ಫಿಕ್ಸ್

Yeddyurappa to resign on Nov.30
ಬೆಂಗಳೂರು, ನ.22: ಭಾರತೀಯ ಜನತಾ ಪಕ್ಷದ ಬಹುವರ್ಷಗಳ ಕಾಲದ ನಂಟನ್ನು ಬಿಡಿಸಿಕೊಳ್ಳಲು ಯಡಿಯೂರಪ್ಪ ಸಿದ್ಧರಾಗಿದ್ದು, ಬಿಜೆಪಿ ತೊರೆಯುವ ದಿನಾಂಕವನ್ನು ಕೆಜೆಪಿ ಮೂಲಗಳು ಹೊರ ಹಾಕಿದೆ. ನ.30 ರಂದು ಯಡಿಯೂರಪ್ಪ ಅವರು ತಮ್ಮ ಶಾಸಕತ್ವಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ಸುಮಾರು 30 ಕ್ಕೂ ಅಧಿಕ ಶಾಸಕರು ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಪುಷ್ಟಿ ನೀಡುವಂತೆ ತಿಂಗಳ ಕೊನೆಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ಕುಣಿಗಲ್ ನಲ್ಲಿ ಗುರುವಾರ(ನ.22) ಹೇಳಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ರಾಜಭವನ ತನಕ ಪಾದಯಾತ್ರೆ ನಡೆಸಿದಂತೆ ಈಗಲೂ ಮೆರವಣಿಗೆ ಮೂಲಕ ತೆರಳಿ ರಾಜೀನಾಮೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ಶಕ್ತಿ ಕೇಂದ್ರ ವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿ ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಮೂಲಗಳು ಹೇಳಿದೆ.

ಹಾವೇರಿ ಸಮಾವೇಶ: ಹಾವೇರಿಯಲ್ಲಿ ನಡೆಯುವ ನೂತನ ಪಕ್ಷದ ಸಮಾವೇಶಕ್ಕೆ ಸಚಿವರು, ಸಂಸದರು ಭಾಗವಹಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಶಾಸಕರು ಮಾತ್ರ ಭಾಗವಹಿಸಲಿ. ಉಳಿದವರ ಬಗ್ಗೆ ಒತ್ತಡ ಹೇರುವುದು ಬೇಡ ಎಂದು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

ಆದರೆ, ಯಾರು ಬರಲಿ, ಬಿಡಲಿ ಕೆಜೆಪಿ ಸ್ಥಾಪನೆ ನಿರ್ಧಾರ ಅಚಲ. ಈ ತಿಂಗಳ ಅಂತ್ಯಕ್ಕೆ ರಾಜೀನಾಮೆ ನೀಡುತ್ತೇನೆ. ಡಿ.9 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶದಲ್ಲಿ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಸ್ಥಾನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೂ ಮುನ್ನ ಯಡಿಯೂರಪ್ಪ ಅವರು ತಮ್ಮ ಮನೆದೇವರಾದ ತಾಲೂಕಿನ ಎಡೆಯೂರು ಶ್ರೀಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದು ಪ್ರಾದೇಶಿಕ ಪಕ್ಷಗಳ ಕಾಲ: ರಾಷ್ಟ್ರೀಯ ಪಕ್ಷಗಳ ನಂಬಿಕೆ, ಮಾನ್ಯತೆ ವಿಶ್ವಾಸ ಕಳೆದುಕೊಳ್ಳುತ್ತಿದೆ. ಪ್ರಾದೇಶಿಕ ಪಕ್ಷಗಳ ಮಹತ್ವ ಹೆಚ್ಚಾಗುತ್ತಿದೆ. ಇದಕ್ಕೆ ತಮಿಳುನಾಡಿನ ಜಯಲಲಿತಾ ಸರ್ಕಾರವೇ ಸಾಕ್ಷಿ. ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸುವ ಹಂತಕ್ಕೆ ಬೆಳೆದಿದೆ.

ರಾಜ್ಯದ ನೆಲ, ಜಲ, ಸಂಸ್ಕೃತಿಯ ಉಳಿವಿಗಾಗಿ ಅಭಿವೃದ್ಧಿಗಾಗಿ ಕೆಜೆಪಿ ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಶೇ 32 ರಷ್ಟು ಮತದಾನವಾಗಿದ್ದು, ಇದು ಲೋಕ ಸಭಾ ಚುನಾವಣಾ ವೇಳೆಗೆ ಶೇ 44ಕ್ಕೆ ಏರಿತು. ಲೋಕಸಭೆಗೆ ದೇಶದಲ್ಲೇ ಅತಿಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಹೆಗ್ಗಳಿಕೆ ಕರ್ನಾಟಕಕ್ಕೆ ಸಲ್ಲುತ್ತದೆ.

ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಕೊಂಡೊಯ್ದ ನನ್ನ ಬೆನ್ನಿಗೆ ಚೂರಿ ಹಾಕಿ ಅಧಿಕಾರದಿಂದ ಕೆಳಗಿಳಿಸಿದರು ಎಂದು ಬಿಎಸ್ ಯಡಿಯೂರಪ್ಪ ನೊಂದು ನುಡಿದರು.

ಯಾರನ್ನು ಕೆಜೆಪಿ ಸೇರಿಕೊಳ್ಳಿ ಎಂದು ಕರೆಯುವುದಿಲ್ಲ. ನನ್ನ ಬೆನ್ನ ಹಿಂದೆ ಕಾರ್ಯಕರ್ತರಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+