ಗುಂಡಿನ ಅಮಲೇರಿ ದಾಂಧಲೆ ಹಾಕಿದ ತಹಶೀಲ್ದಾರ್

ಇಂತಹ ಘನಂದಾರಿ ಕೆಲಸ ಮಾಡಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಹಶೀಲ್ದಾರ್ ಆಗಿರುವ ಶಂಕರ್ ಲಿಂಗಣ್ಣ ವಣಿಕ್ಯಾಳ್ ಅವರು. ಯಾದಗಿರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಡ್ಡಿ ಲಾಡ್ಜ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಹೋಟೆಲಿ ಸಿಬ್ಬಂದಿಗಳನ್ನು ಮಾತ್ರವಲ್ಲ, ಬಂಧಿಸಲು ಬಂದ ಪೊಲೀಸರನ್ನು ಕೂಡ ಈ ಶಂಕರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಆಗಿದ್ದೇನೆಂದರೆ, ಮಡ್ಡಿ ಲಾಡ್ಜಿನ ರೂಂ ನಂ. 211ರಲ್ಲಿ ಸ್ನೇಹಿತರೊಡಗೂಡಿ ಶಂಕರ್ ಲಿಂಗಣ್ಣ ವಣಿಕ್ಯಾಳ್ ಮದ್ಯ ಸೇವನೆ ಮಾಡಿ, ಇಸ್ಪೀಟ್ ಆಡಿದ್ದಾರೆ. ಇಷ್ಟೇ ಆಗಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಊಟ ನೀಡಲು ಬಂದ ಮಾಣಿಯೊಡನೆ ಶಂಕರ್ ಮತ್ತಿತರರು ಜಗಳ ಕಾದಿದ್ದಾರೆ ಮತ್ತು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ಲಾಡ್ಜಿನ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಜಟಾಪಟಿ ತಾರಕಕ್ಕೇರುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ಮಾಣಿಗಳನ್ನು ನಿಂದಿಸುತ್ತಿದ್ದ ಶಂಕರ್ ರೂಮಿನಲ್ಲಿ ಇದ್ದ ಟಿವಿ, ಟೇಬಲ್, ಟೆಲಿಫೋನ್ ಒಡೆದು ಚೂರುಚೂರು ಮಾಡಿದ್ದಾರೆ. ಟಿವಿ ಒಡೆಯುವಾಗ ಗಾಜಿನ ಚೂರು ಅವರ ಹಣೆಗೂ ತಾಕಿ ರಕ್ತ ಚಿಮ್ಮಿದೆ. ಆದರೆ, ತಮಗೆ ಸಿಬ್ಬಂದಿಗಳೇ ಹೊಡೆದು ಗಾಯ ಮಾಡಿದ್ದಾರೆ ಎಂದು ಕುಡಿದ ಮತ್ತಿನಲ್ಲಿದ್ದ ತಹಶೀಲ್ದಾರ್ ಹಾರಾಟ ಮಾಡಿದ್ದಾರೆ.
ಈ ನಡುವೆ ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಬಂದ ನಗರ ಪೊಲೀಸರು ಹಾಗೂ ತಹಸೀಲ್ದಾರ್ ನಡುವೆಯೂ ಕೂಡಾ ಮಾತಿನ ಚಕಮಕಿ ನಡೆದಿದೆ. ಬಂಧಿಸಬೇಕಾಗಿದ್ದು ಹಲ್ಲೆ ಮಾಡಿದ ಹೋಟೆಲಿನ ಸಿಬ್ಬಂದಿಗಳನ್ನ, ನನ್ನನ್ಯಾಕೆ ಬಂಧಿಸುತ್ತಿದ್ದೀರಿ ಎಂದು ಅವರ ಮೇಲೆಯೇ ತಹಶೀಲ್ದಾರ್ ರೇಗಾಡಿದ್ದಾರೆ. ಈ ತಮಾಷೆ ನೋಡುತ್ತಿದ್ದ ಸಾರ್ವಜನಿಕರಿಗೆ ಭರ್ತಿ ಮನರಂಜನೆ.
ಈ ನಡುವೆ ನಗರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹರಿಬಾ ಜಮಾದಾರ ತಹಶೀಲ್ದಾರ್ ಅವರನ್ನು ಜೀಪಿನಲ್ಲಿ ಕರೆದುಕೊಡು ಆಸ್ಪತ್ರೆಗೆ ಹೋಗಿ ಅಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದರು. ಗಾಯಗೊಂಡಿದ್ದ ವೇಟರ್‌ಗಳಿಗೂ ಚಿಕಿತ್ಸೆ ಕೊಡಿಸಲಾಗಿದೆ. ಸಾರ್ವಜನಿಕರ ಕಷ್ಟನಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ತಹಶೀಲ್ದಾರ್ ಅವರೇ ಹೀಗೆ ನಡೆದುಕೊಂಡರೆ ಹೇಗೆ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ.












Click it and Unblock the Notifications