ಪತ್ನಿ,ಪುತ್ರನಿಗೆ ಜೆಡಿಎಸ್ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ

ನನ್ನ ಪುತ್ರ ಪ್ರಜ್ವಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎನ್ನುವುದು ಬರೀ ಊಹಾಪೋಹ. ಇನ್ನು ಭವಾನಿ ಚುನಾವಣೆಗೆ ನಿಲ್ಲಲಿದ್ದಾರೆ ಎನ್ನುವ ಬಗ್ಗೆ ಜಿಲ್ಲೆಯ ಹಲವು ಕಡೆ ಗೊಂದಲ ಸೃಷ್ಟಿಯಾಗಿರುವುದು ನಿಜ. ಆದರೆ ಯಾವುದೇ ಕಾರಣಕ್ಕೂ ದೇವೇಗೌಡರು ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ರೇವಣ್ಣ ಸ್ಪಷ್ಟ ಪಡಿಸಿದ್ದಾರೆ.
ದೇವೇಗೌಡರು ನೀಡುವ ಮಾರ್ಗದರ್ಶನದಲ್ಲಿ ಕೆಲಸ ಮಾಡಿಕೊಂಡು ಹೋಗುವುದಷ್ಟೇ ನನ್ನ ಕೆಲಸ. ಪಕ್ಷಕ್ಕೆ ಸಂಬಂಧಪಟ್ಟ ಯಾವುದೇ ನಿರ್ಧಾರ ದೇವೇಗೌಡರು ತೆಗೆದುಕೊಳ್ಳುತ್ತಾರೆ ಎಂದು ರೇವಣ್ಣ ಹೇಳಿದ್ದಾರೆ.
ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕೆಂದು ಈಗಲೇ ನಿರ್ಧರಿಸಲಾಗದು. ಕ್ಷೇತ್ರದಲ್ಲಿ ಕೆಲಸ ಮಾಡುವ ಯೋಗ್ಯ ಪ್ರತಿನಿಧಿಯನ್ನು ಆಯ್ಕೆ ಮಾಡಿ ಜೆಡಿಎಸ್ ಟಿಕೆಟ್ ನೀಡಲಿದೆ ಎಂದು ರೇವಣ್ಣ ಹೇಳಿದ್ದಾರೆ.
ಶಾಸಕ ಪುಟ್ಟೇಗೌಡ ಮತ್ತು ಮಾಜಿ ಶಾಸಕ ವಿಶ್ವನಾಥ್ ಅವರಿಗೆ ನಾನು ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವರು ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದರು, ಹಾಗಾಗಿ ನನ್ನ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ ಎಂದು ರೇವಣ್ಣ ದೂರಿದ್ದಾರೆ.
ಶಾಸಕಾಂಗ ಪಕ್ಷದ ನಾಯಕರಾಗಿರುವ ಎಚ್ ಡಿ ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ನಮ್ಮಿಂದ ಸಹಿಸಲಾಗುತ್ತಿಲ್ಲ. ಹಾಗಾಗಿ ಒಲ್ಲದ ಮನಸ್ಸಿನಿಂದ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಶ್ರವಣಬೆಳಗೊಳ ಶಾಸಕ ಪುಟ್ಟೇಗೌಡ ರಾಜೀನಾಮೆ ನೀಡಿದ್ದರು.
ಅಲ್ಲದೇ, ರೇವಣ್ಣನಂತಹ ಮನುಷ್ಯತ್ವವಿಲ್ಲದ ವ್ಯಕ್ತಿಯ ಜೊತೆ ನಾವು ಮುಂದುವರಿಯಲು ಆಗುವುದಿಲ್ಲ ಎಂದು ಸಕಲೇಶಪುರದ ಮಾಜಿ ಶಾಸಕ ಎಚ್ಎಂ ವಿಶ್ವನಾಥ್ ಕೂಡಾ ರೇವಣ್ಣ ವಿರುದ್ದ ಟೀಕಾ ಪ್ರಹಾರ ಮಾಡಿ ರಾಜೀನಾಮೆ ನೀಡಿದ್ದರು.












Click it and Unblock the Notifications