'ನಾನು ಡೆಂಗ್ಯೂ ಸೊಳ್ಳೆಯಿದ್ದಂತೆ, ಕಚ್ಚಿದ್ರೆ ಅಷ್ಟೇ'!

ಕೇಂದ್ರದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ಕೇಜ್ರಿವಾಲ್ ಅವರು ಸತತವಾಗಿ ಮಾಡುತ್ತಿರುವ ದಾಳಿಯನ್ನು ಸೊಳ್ಳೆಯ ಕಡಿತಕ್ಕೆ ಹೋಲಿಸಿದ್ದು, "ಅದರಿಂದ ಸ್ವಲ್ಪ ತುರಿಕೆಯಾಗುತ್ತದಷ್ಟೆ, ಹೆಚ್ಚೇನು ಆಗುವುದಿಲ್ಲ" ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಅರವಿಂದ್ ಕೇಜ್ರಿವಾಲ್ ಅವರು, "ತಾವು ಬರೀ ಸೊಳ್ಳೆಯಲ್ಲ, ಡೆಂಗ್ಯೂ ಸೊಳ್ಳೆ, ಕಚ್ಚಿದ್ರೆ ಅಷ್ಟೇ" ಎಂದು ಎಚ್ಚರಿಸಿದ್ದಾರೆ.
ರಾಜಕಾರಣಿಗಳ ಮೇಲೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರ ಮೇಲೆ ಸತತವಾಗಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ದಾಖಲೆಗಳನ್ನು ಮಾಧ್ಯಮದವರ ಮುಂದೆ ಹಿಡಿದರೆ ಸಾಲದು, ಅವರ ಬಳಿ ಸಾಕ್ಷಿಗಳಿದ್ದರೆ ಅವರು ಸರಕಾರಿ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಬರೀ ಆರೋಪಿಸಿ ಮಾನನಷ್ಟ ಮಾಡುವುದರಿಂದ ಅವರಿಗೇನೂ ಸಿಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ಗುರಿ ಯಾರು? : ಕಾಂಗ್ರೆಸ್, ಬಿಜೆಪಿ ರಾಜಕಾರಣಿಗಳು ಮತ್ತು ಸ್ವಿಸ್ ಬ್ಯಾಂಕಲ್ಲಿ ಕೋಟಿಗಟ್ಟಲೆ ಅಕ್ರಮ ಕಪ್ಪುಹಣ ಇಟ್ಟಿದ್ದಾರೆಂದು ಕಾರ್ಪೊರೇಟ್ ದಿಗ್ಗಜರ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಝಳಪಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರ ಮುಂದಿನ ದಾಳಿಯ ಗುರಿ ಯಾರಾಗಲಿದ್ದಾರೆ ಎಂಬುದನ್ನು ಅವರೇ ಬಹಿರಂಗಪಡಿಸಿದ್ದಾರೆ.
ಮುಂದಿನ ದಾಳಿಯನ್ನು ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾಡುವುದಾಗಿ ರಾಜಕೀಯಕ್ಕೂ ಕಾಲಿಟ್ಟಿರುವ ಅರವಿಂದ್ ಅವರು ಶನಿವಾರ ಘೋಷಿಸಿದ್ದಾರೆ. ದೇಶದಲ್ಲಿ ಭಾರೀ ಅಕ್ರಮ ಎಸಗಿರುವ ಘಟಾನುಘಟಿಗಳು ಕೇಸುಗಳು ಕೋರ್ಟುಗಳಲ್ಲಿ ವರ್ಷಾನುವರ್ಷಗಳಿಂದ ಕೊಳೆಯುತ್ತ ಬಿದ್ದಿವೆ. ಇದಕ್ಕೆಲ್ಲ ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತಾದ ವಿವರಗಳನ್ನು ಸುಪ್ರೀಂ ಕೋರ್ಟ್ ನ್ಯಾಯವಾದಿಯಾಗಿರುವ ಪ್ರಶಾಂತ್ ಭೂಷಣ್ ಅವರು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications