ಅರ್ಚಕನಿಂದ ಬೆಂಗಳೂರು ಮಹಿಳೆಯ ಮೇಲೆ ಅತ್ಯಾಚಾರ

ಹಗರೆಯ ಒಂಟಿಗತ್ತಿ ದೇವಸ್ಥಾನದ ಅರ್ಚಕ ದೇವರಾಜು ಅತ್ಯಾಚಾರ ಆರೋಪಿ. ಬಾಧಿತ ಮಹಿಳೆ ನೀಡಿರುವ ದೂರಿನ ಮೇರೆಗೆ ಹಳೆಬೀಡು ಪೊಲೀಸರು ದೇವರಾಜುನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಬೆಂಗಳೂರಿನಿಂದ 175 ಕಿಮೀ ದೂರದಲ್ಲಿರುವ ಹಗರೆಗೆ ಭಾನುವಾರ ಬಂದಿದ್ದರು. ಸ್ಥಳೀಯರ ಬಳಿ ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕೆಂದು ವಿಚಾರಿಸಿದಾಗ ಒಂಟಿಗತ್ತಿ ದೇವಾಲಯದ ಅರ್ಚಕರು ಪೂಜೆ ಮಾಡಿಸಿಕೊಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅದರಂತೆ ಮಹಿಳೆ ದೇವಸ್ಥಾನಕ್ಕೆ ತೆರಳಿದರು.
ಅಲ್ಲಿ ಅರ್ಚಕ ದೇವರಾಜು ಮಹಿಖೆಯ ಕೋರಿಕೆಯಂತೆ ಪೂಜೆ ಮಾಡಿಸಿದ ಬಳಿಕ, ತನ್ನ ಬೈಕಿನಲ್ಲಿ ಮಹಿಳೆಯನ್ನು ಸಮೀಪದ ಇತರೆ ದೇವಾಲಯಗಳಿಗೂ ಕರೆದೊಯ್ದಿದ್ದಾನೆ. ಕಡೆಯಲ್ಲಿ ಕೋಡಿಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಪಡೆದು ದೇವಾಲಯದ ಹಿಂಭಾಗಕ್ಕೆ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಮಾಡಿದನೆನ್ನಲಾಗಿದೆ.
ಈ ಘಟನೆ ನಂತರ ಮಹಿಳೆಯು ಹಳೇಬೀಡಿಗೆ ಬಂದು ದೇಗುಲಗಳ ಧರ್ಮದರ್ಶಿಗಳ ಬಳಿ ವಿಷಯ ತಿಳಿಸಿ ಪಂಚಾಯಿತಿ ಕರೆದು ಅತ್ಯಾಚಾರ ಎಸಗಿರುವ ದೇವರಾಜು ತನ್ನನ್ನು ಮದುವೆ ಆಗಬೇಕು. ಇಲ್ಲವೇ ತನಗೆ 2 ಲಕ್ಷ ರೂ. ಪರಿಹಾರ ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಳು ಎನ್ನಲಾಗಿದೆ.
ಆದರೆ ರಾಜಿ-ಸಂಧಾನ ವಿಫಲವಾದಾಗ ಮಹಿಳೆಯು ಸೋಮವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರಿಂದ ಅರ್ಚಕ ದೇವರಾಜುವನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.












Click it and Unblock the Notifications