ಅಲ್ಪಸಂಖ್ಯಾತರ ವಿಶ್ವವಿದ್ಯಾಲಯ ಆರಂಭಕ್ಕೆ ಖಂಡನೆ

ವಿಶ್ವವಿದ್ಯಾಲಯಗಳು ಸಾರ್ವತ್ರಿಕವಾಗಿರಬೇಕು, ಯಾವುದೇ ಒಂದು ವರ್ಗಕ್ಕೆ ಅಥವಾ ಧರ್ಮಕ್ಕೆ ಸೀಮಿತವಾಗಿರಬಾರದು. ವಿಶ್ವವಿದ್ಯಾಲಯ ಒಮ್ಮೆ ಸ್ಥಾಪನೆಯಾದರೆ ಅದರು ಸಂವಿಧಾನದ 12 ನೇ ವಿಧಿಯನ್ವಯ ಕಾರ್ಯನಿರ್ವಹಿಸಬೇಕು. ಆದರೆ, ಅಲ್ಪ ಸಂಖ್ಯಾತ ವಿವಿ ಸ್ಥಾಪನೆಯಿಂದ ಸಂವಿಧಾನದ ನಿಯಮ ಮೀರಿದಂತೆ ಆಗುತ್ತದೆ.
ವಿಶ್ವವಿದ್ಯಾಲಯ ಯಾವುದೇ ಧರ್ಮಕ್ಕೆ ಸೇರಿದ್ದಾಗಿರಬಾರದು ಎಂದು ಸುಪ್ರೀಂಕೋರ್ಟ್ ಎಸ್.ಅಜೀಜ್ ಬಾಷಾ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ತೀರ್ಪು ನೀಡಿದೆ. ಅಲ್ಲದೇ, ಒಂದು ವೇಳೆವಿಶ್ವವಿದ್ಯಾಲಯದಲ್ಲಿ ಧರ್ಮವನ್ನು ಪರಿಚಯಿಸಿದರೆ ಅದು ಜಾತ್ಯತೀತ ತತ್ವಕ್ಕೆ ವಿರೋಧಿಯಾಗುತ್ತದೆ. ಕೋಮುವಾದ ನುಸುಳಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವಂತಹ ಅಪಾಯ ಇರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಕೇಂದ್ರ ಸಚಿವ ರೆಹಮಾನ್‌ಖಾನ್ ಅವರು ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. 50 ರಷ್ಟು ಮೀಸಲಾತಿ ನಿಗದಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಕಾನೂನಿಗೆ 1981ರಲ್ಲಿ ತಿದ್ದುಪಡಿ ತಂದು ಮೀಸಲಾತಿ ಜಾರಿಗೆ ತರಲಾಗಿತ್ತು.
ಆದರೆ, ಈ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಮೀಸಲಾತಿ ನಿರ್ಧಾರವನ್ನು ರದ್ದು ಮಾಡಿತ್ತು. ವಿಭಾಗೀಯ ಪೀಠವೂ ಇದೇ ತೀರ್ಪನ್ನು ಎತ್ತಿಹಿಡಿದಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಹೈಕೋರ್ಟ್ ಅನುಸರಿಸಿರುವುದರಿಂದ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿರ್ಧಾರ ಸಂವಿಧಾನಬಾಹಿರ ಮತ್ತು ದೇಶದ ಹಿತಾಸಕ್ತಿಗೆ ವಿರೋಧದ ನಿರ್ಧಾರವಾಗುತ್ತದೆ ಎಂದು ನ್ಯಾ.ರಾಮಾಜೋಯಿಸ್ ಹೇಳಿದ್ದಾರೆ.












Click it and Unblock the Notifications