ಯಡಿಯೂರಪ್ಪ ಒಬ್ಬ ಕತ್ತೆ: ಉನ್ನತ ಶಿಕ್ಷಣ ಸಚಿವ ಸಿಟಿ ರವಿ

ಸಿಟಿ ಹೇಳಿದ ಕಥೆಯನ್ನು ಸ್ವಲ್ಪ ಕೇಳಿ: 'ಒಂದೂರಲ್ಲಿ ಒಂದು ಕತ್ತೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟು, ಪ್ರತಿದಿನ ಜನ ಅದಕ್ಕೆ ಪೂಜೆ ಮಾಡುತ್ತಿದ್ದರು. ಆದರೆ, ಕತ್ತೆ ಜನರು ತನಗೇ ಪೂಜೆ ಮಾಡುತ್ತಿದ್ದಾರೆ ಎಂದು ಭಾವಿಸಿ ಅಹಂಕಾರದಿಂದ ವರ್ತಿಸುತಿತ್ತು'
'ಕೆಲ ದಿನ ಇದು ಹೀಗೆ ಮುಂದುವರಿದಿತ್ತು. ಕತ್ತೆಯ ಅಹಂಕಾರ ಕಂಡು ಬೇಸತ್ತ ಊರಿನ ಜನ ಕೊನೆಗೆ ಆ ಕತ್ತೆಯ ಮೇಲಿದ್ದ ದೇವರ ಮೂರ್ತಿಯನ್ನು ತೆಗೆದು ಮತ್ತೂಂದು ಕತ್ತೆಯ ಮೇಲೆ ಕೂರಿಸಿದ್ದರು. ದೇವರ ಮೂರ್ತಿ ಬದಲಿಸಿದ ಬಳಿಕ ದುರಹಂಕಾರದಿಂದ ವರ್ತಿಸುತ್ತಿದ್ದ ಕತ್ತೆಯನ್ನು ಯಾರೂ ಕ್ಯಾರೆ ಎನ್ನಲಿಲ್ಲ. ತನ್ನನ್ನು ಯಾರೂ ಗಮನಿಸದಿದ್ದಾಗ ನಾನು ಹಾಗೆ ವರ್ತಿಸಬಾರದು ಎಂದು ಆ ಕತ್ತೆಗೆ ಬುದ್ಧಿ ಬಂತು'
ಹೀಗೆಂದು ಶಿಕ್ಷಣ ಸಚಿವ ಸಿ ಟಿ ರವಿ ಸರ್ ನೀತಿ ಕಥೆಯನ್ನು ಬೋಧಿಸಿದ್ದಾರೆ. ಅಷ್ಟೇ ಅಲ್ಲ ಇದರ ನೀತಿಪಾಠ ಏನು ಎಂಬುದನ್ನು ಅವರವರ ಊಹೆ/ಭಾವಕ್ಕೆ ಬಿಟ್ಟಿದ್ದಾರೆ. 'ಯಾರು ಕತ್ತೆ, ಯಾರು ದೇವರು ಎಂಬುದನ್ನು ಹೇಳಿ, ನನ್ನ ಬಾಯಿಯನ್ನು ಕೆಡಿಸಿಕೊಳ್ಳೊಲ್ಲಾ. ಅದೆಲ್ಲ ಪಕ್ಷದ ಕಾರ್ಯಕರ್ತರಿಗೆ ಬಿಡುತ್ತೇನೆ' ಎಂದು ಹೇಳಿ ಮಗುಮ್ಮಾಗಿ ಕುಳಿತರು.
ರವಿ ಕತ್ತೆ ಕಥೆಗೆ ಅನಂತ ಕುಮಾರ್ ಪ್ರೇರಣೆಯಾದರೆ?: ಅದಕ್ಕೂ ಮುನ್ನ ರವಿಯ ಈ ಕಥೆಗೆ ಪ್ರೇರಣೆಯಾದವರು ಅವರದೇ ಪಕ್ಷ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಯಡಿಯೂರಪ್ಪನವರ ಕಡುವಿರೋಧಿ, ಸಂಸದ ಅನಂತ ಕುಮಾರ್ ಅವರು. ಯಡಿಯೂರಪ್ಪ ಅವರನ್ನುದ್ದೇಶಿ ಪರೋಕ್ಷವಾಗಿ ಕಿಡಿಕಾರಿದ ಅನಂತ್, 'ಭಾರತೀಯ ಜನತಾ ಪಕ್ಷ ಎಂದಿಗೂ ದೇಶ, ಜನರಿಗೆ ಮೊದಲ ಆದ್ಯತೆ ನೀಡುತ್ತದೆ, ಯಾವುದೇ ಒಬ್ಬ ವ್ಯಕ್ತಿಗೆ ಅಲ್ಲ' ಎಂದು ಹೇಳಿದ್ದಾರೆ.
ಅಂದಹಾಗೆ ಇದೆಲ್ಲ ನಡೆದಿದ್ದು ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಂಗಳೂರು ನಗರ ಬಿಜೆಪಿ ಕಾರ್ಯಕರ್ತ ವಿಶೇಷ ಸಭೆಯಲ್ಲಿ. ಇದನ್ನೆಲ್ಲ ಕೇಳಿಸಿಕೊಂಡ ಯಡಿಯೂರಪ್ಪನವರು ಯಾರಿಗೆ/ ಹೇಗೆ/ ಯಾವಾಗ ಒದೆಯುತ್ತಾರೆ ಎಂಬ ಸಹಜ ಕುತೂಹಲ ಮೂಡಿದೆ.












Click it and Unblock the Notifications