ರೈಲು ಪ್ರಯಾಣಿಕರಿಗೆ ಗುರುತಿನ ಚೀಟಿ ಕಡ್ಡಾಯ

ಡಿ.1 ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಕಾದಿರಿಸಿರುವ ಟಿಕೆಟ್ ಹೊಂದಿರುವ ಎಲ್ಲಾ ತರಗತಿಯ ಪ್ರಯಾಣಿಕರು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
ಪ್ರಯಾಣಿಕರ ಭಾವಚಿತ್ರವಿರುವ ಗುರುತಿನ ಚೀಟಿಯ ಒರಿಜಿನಲ್ ಪ್ರತಿ ಪ್ರಯಾಣದ ವೇಳೆ ಇಟ್ಟುಕೊಳ್ಳಬೇಕಿದ್ದು, ಅಧಿಕಾರಿಗಳು ಬಂದಾಗ ತೋರಿಸಬೇಕಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಇದುವರೆವಿಗೂ ಈ ಗುರುತಿನ ಚೀಟಿಯನ್ನು ಇ-ಟಿಕೆಟ್ ಹಾಗೂ ತತ್ಕಾಲ್ ಮತ್ತು ಹವಾನಿಯಂತ್ರಿತ ಕ್ಲಾಸಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಮಾತ್ರ ಕಡ್ಡಾಯ ಮಾಡಲಾಗಿತ್ತು.
ಆದರೆ, ಟಿಕೆಟ್ ಬುಕ್ಕಿಂಗ್ ಅವ್ಯವಹಾರಗಳ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಹೀಗಾಗಿ ಎಲ್ಲಾ ಶ್ರೇಣಿಯ ಪ್ರಯಾಣಿಕರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ.
ಗ್ರಾಮ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಸರ್ಕಾರಿ ಸಂಸ್ಥೆ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹೊಂದಿದ್ದರೆ ಸಾಕು ಎಂದು ರೈಲ್ವೇ ಇಲಾಖೆ ಹೇಳಿದೆ.
ಊಟದ ವ್ಯವಸ್ಥೆ ಸುಧಾರಣೆ: ರೈಲುಗಳಲ್ಲಿ ನೀಡಲಾಗುತ್ತಿರುವ ಆಹಾರದ ಬಗ್ಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಲಾಗುವುದು ಎಂದು ರೈಲ್ವೆ ಸಚಿವ ಪವನ್ ಕುಮಾರ್ ಹೇಳಿದ್ದಾರೆ.
ಪ್ರಸಕ್ತ ವರ್ಷ ರೈಲ್ವೆ ಇಲಾಖೆಗೆ ಸುಮಾರು 40,000 ಕೋಟಿ ರು ಅಗತ್ಯವಿದೆ. ಕಳೆದ ವರ್ಷ 25,000 ರು ನಲ್ಲೇ ನಿಭಾಯಿಸಲಾಗಿತ್ತು. ಸದ್ಯಕ್ಕೆ ಐದು ಹೊಸ ಬುಲೆಟ್ ಟ್ರೈನ್ ಯೋಜನೆ ಬಗ್ಗೆ ಚಿಂತನೆ ನಡೆದಿದೆ ಉಳಿದಂತೆ ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳು ಪೂರ್ಣಗೊಂಡರೆ ವ್ಯವಸ್ಥೆ ಸರಿ ಹೋಗುತ್ತೆ ಎಂದು ಸಚಿವ ಪವನ್ ಕುಮಾರ್ ಹೇಳಿದ್ದಾರೆ.
ಚಾಲ್ತಿಯಲ್ಲಿರುವ ಮುಂಗಡ ಬುಕ್ಕಿಂಗ್ ಕೌಂಟರ್ ಗಳ ಜೊತೆಗೆ ಹೆಚ್ಚಿನ ತತ್ಕಾಲ್ ಕೌಂಟರ್ ಗಳನ್ನು ಆರಂಭಿಸಲು ರೈಲ್ವೇ ಇಲಾಖೆ ಚಿಂತಿಸಿದೆ. ಸಿಸಿಟಿವಿ ಕೆಮೆರಾಗಳ ಅಳವಡಿಕೆ, ಟಿಕೆಟ್ ನೀಡುವ ಕ್ಲರ್ಕ್ ಗಳಿಗೆ ಮೊಬೈಲ್ ಬಳಕೆ ನಿಷೇಧ, ಪೊಲೀಸ್ ಗಸ್ತು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ.
ಸದ್ಯಕ್ಕೆ 2677 ರೈಲುಗಳು 1.71 ಲಕ್ಷ ಬರ್ಥ್ ಗಳಿಗೆ ತತ್ಕಾಲ್ ಸೇವೆ ಲಭ್ಯವಿದೆ. 2011-12ರಲ್ಲಿ ತತ್ಕಾಲ್ ಯೋಜನೆಯೊಂದರಿಂದಲೇ ಇಲಾಖೆಗೆ 847 ಕೋಟಿ ರು ಆದಾಯ ಗಳಿಸಿದೆ. ತತ್ಕಾಲ್ ಯೋಜನೆಯ ಜನಪ್ರಿಯತೆ ಹಾಗೂ ಅವ್ಯವಸ್ಥೆಯನ್ನು ಅಧ್ಯಯನ ನಡೆಸಿರುವ ಇಲಾಖೆ ಅನೇಕ ಬದಲಾವಣೆಗಳನ್ನು ತರಲು ನಿರ್ಧರಿಸಿದೆ ಎಂದು ಬನ್ಸಲ್ ಹೇಳಿದ್ದಾರೆ.












Click it and Unblock the Notifications