ಅಧಿಕಾರ ಪೀಠ : ಹಿಂದುಳಿದವರ ಒಲವು ಯಾರ ಕಡೆಗೆ?

ಹಿಂದುಳಿದವರು ಅಂದ ತಕ್ಷಣ ನಮಗೆ ನೆನಪಾಗೋದು ಕುರುಬ ಸಮುದಾಯ ಅಥವಾ ಈಡಿಗ ಸಮುದಾಯ ಮಾತ್ರ. ಆದರೆ ರಾಜ್ಯದಲ್ಲಿ ಈ ಎರಡು ಸಮುದಾಯಗಳನ್ನು ಹೊರತು ಪಡಿಸಿ ಸುಮಾರು ಶೇ ೩೦ರಷ್ಟು ಇತರೇ ಹಿಂದುಳಿದ ಸಮುದಾಯಗಳು ಇವೆ.
ಇದರಲ್ಲಿ ವಿಶ್ವಕರ್ಮ, ಉಪ್ಪಾರ, ನೇಕಾರ, ಮಡಿವಾಳ, ಕುಂಬಾರ, ಯಾದವ, ಗಾಣಿಗ, ಬಲಿಜಿಗ, ಕಮ್ಮ ಇತ್ಯಾದಿ ನೂರಕ್ಕೂ ಹೆಚ್ಚಿನ ಜಾತಿಗಳು ಬರುತ್ತವೆ.
ಆದರೆ ರಾಜಕೀಯವಾಗಿ ನೋಡಿದಾಗ ಇವೆಲ್ಲಾ ಅತ್ಯಂತ ದುರ್ಬಲವಾಗಿವೆ. ಇವುಗಳಲ್ಲೆ ಎಷ್ಟೋ ಜಾತಿಗಳಿಗೆ ಇದುವರಿಗೆ ರಾಜಕೀಯ ಸ್ಥಾನಮಾನ ಕೂಡ ಸಿಕ್ಕಿಲ್ಲ. ಈ ಹಿಂದುಳಿದ ಸಮುದಾಯಗಳನ್ನು ಯಾವ ರಾಜಕೀಯ ಪಕ್ಷವೂ ಹೆಚ್ಚಿನ ಒತ್ತುಕೊಟ್ಟು ಗುರ್ತಿಸುವ ಕೆಲಸವನ್ನೆ ಮಾಡಿಲ್ಲ.
ಯಡಿಯೂರಪ್ಪನವರು ಆರಂಭಿಸಿದ ಮಠಗಳಿಗೆ ಅನುದಾನ ಕಾರ್ಯಕ್ರಮವೇ ಹಾಗೇ ನೋಡಿದರೆ ಈ ಸಮುದಾಯಗಳಲ್ಲಿ ಒಂದಷ್ಟು ಚಲನೆ ಉಂಟು ಮಾಡಿದ್ದು ಅಂತ ಹೇಳಬಹುದು.
ಅಲ್ಲಿಂದ ಒಂದಷ್ಟು ಚುರುಕುಗೊಂಡ ಈ ಸಮುದಾಯಗಳು ಮೊದಲು ತಮ್ಮ ಮಠಗಳಿಗೂ ಹೆಚ್ಚಿನ ಅನುದಾನ ನೀಡುವಂತೆ ಅಗ್ರಹಿಸಿದವು, ನಂತರ ನಿಧಾನವಾಗದರೂ ರಾಜಕೀಯವಾಗಿ ಕೂಡ ಹಕ್ಕೋತ್ತಾಯ ಮಾಡಲು ಮುಂದಾಗಿವೆ.
ಆದರೆ ಈ ಸಮುದಾಯಗಳಲ್ಲಿನ ನಾಯಕತ್ವಗಳನ್ನು ಗುರ್ತಿಸಿ ಟಿಕೇಟ್ ನೀಡಲು ಎಷ್ಟು ಪಕ್ಷಗಳು ಸಿದ್ದವಿದೆ? ಪಕ್ಕದ ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಮುಂದಿನ ಚುನಾವಣೆಯಲ್ಲಿ ನೂರು ಸ್ಥಾನಗಳನ್ನು ಹಿಂದುಳಿದವರಿಗೆ ನೀಡುವುದಾಗಿ 'ಬಿಸಿ ಡಿಕ್ಲೇರೇಶನ್' ಘೋಷಿಸಿದೆ.
ಇದಕ್ಕೆ ಧ್ವನಿಗೂಡಿಸಿರುವ ಮತ್ತೊಂದು ಪ್ರಮುಖ ವಿರೋಧ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಮತ್ತೊಂದು ಪ್ರಸ್ತಾಪ ಮುಂದು ಮಾಡಿದ್ದು 'ಬಿಸಿ ಮತದಾರರು ಪ್ರಬಲವಾಗಿರುವ ಸ್ಥಾನಗಳನ್ನು ಗುರ್ತಿಸಿ ಎಲ್ಲಾ ರಾಜಕೀಯ ಪಕ್ಷಗಳು ಆ ನೂರು ಸ್ಥಾನಗಳಲ್ಲಿ ಕೇವಲ ಬಿಸಿ ಅಭ್ಯರ್ಥಿಗಳೆ ನಿಲ್ಲಿಸುವಂತ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಬೇಕು' ಅಂತ ಕೋರಿದ್ದಾರೆ.
ನಮ್ಮಲ್ಲಿ ನೂರು ಸ್ಥಾನಗಳು ಬಿಡಿ ಕನಿಷ್ಟ 25 ಸ್ಥಾನಗಳನ್ನಾದ್ರೂ ಅತಿ ಹಿಂದುಳಿದ ಸಮುದಾಯದ ಪ್ರತಿನಿಧಿಗಳು ಆಯ್ಕೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಇಂತಹ ಒಂದು ನಿರ್ಣಯಕ್ಕೆ ಬರಲು ಸಾಧ್ಯವೆ?.
ಯಾಕೆಂದ್ರೆ ಒಲಾಢ್ಯರ ವಿರುದ್ದ ಹೋರಾಡಿ ಅಧಿಕಾರ ಬರುವಷ್ಟು ನಾಯಕತ್ವಗಳು ಅತಿ ಹಿಂದುಳಿದ ಸಮುದಾಯಗಳಲ್ಲಿ ಇಲ್ಲ. ಸಾಮಾಜಿಕ ಅಭಿವೃದ್ದಿಗೆ ರಾಜಕೀಯ ಅಡಿಪಾಯ ಅನಿವಾರ್‍ಯವಾಗಿದ್ದು, ರಾಜಕೀಯ ನಾಯಕತ್ವ ಸಾಮಾಜಿಕ ಅಭಿವೃದ್ದಿಗೆ ಅನಿವಾರ್‍ಯ. ಈಗಾಗಿ ಅತಿಹಿಂದುಳಿದರವನ್ನು ಗುರ್ತಿಸಿ, ನಾಯಕತ್ವವನ್ನು ನೀಡುವುದು ಸಾಮಾಜಿಕ ಅಭಿವೃದ್ದಿಯ ಒಂದು ಭಾಗವಾಗಿರುತ್ತದೆ.
ಆದರೆ ಈಗಲ್ಲೂ ಅದು ರಾಜಕೀಯದ ಒಂದು ಭಾಗವಾಗಿ ಯಾವುದೇ ರಾಜಕೀಯ ಪಕ್ಷವೂ ನೋಡುತ್ತಿಲ್ಲ. ಇದೇ ಕಾರಣದಿಂದಲ್ಲೇ ಹಿಂದುಳಿದವರು ಮೇಲ್ಜಾತಿಯವರು ಅಧಿಕಾರಕ್ಕೆ ಬರಲು ಏಣಿಯಾಗಿ ಮಾತ್ರ ಒಳಕೆ ಆಗುತ್ತಿದ್ದಾರೆ, ಮುಂದಿನ ಚುನಾವಣೆಯಲ್ಲಿಯೂ ಅವರು ಇದೇ ಕೆಲಸಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಒಳಸಿಕೊಳ್ಳುತ್ತವೆ.












Click it and Unblock the Notifications