ಅಡ್ವಾಣಿ ಕೈ ಹಿಡಿಯಲಿಲ್ಲ ಎಂಬ ನೋವಿದೆ: ಬಿಎಸ್ ವೈ

BS Yeddyurappa
ಬಾಗಲಕೋಟೆ, ಅ.29: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ತಾವೇ ಕಟ್ಟು ಬೆಳೆಸಿದ ಪಕ್ಷದಿಂದ ಹೊರ ನಡೆಯುತ್ತಿರುವುದರ ಬಗ್ಗೆ ಕೊಂಚ ವ್ಯಥೆಯಿದೆ. ಅದಕ್ಕಿಂತ ಹೆಚ್ಚಾಗಿ ಕಷ್ಟಕಾಲದಲ್ಲಿ ಕೈ ಹಿಡಿಯದೆ ಸುಮ್ಮನೇ ಕುಳಿತ ಬಿಜೆಪಿ ಹಿರಿ ಮುಖಂಡ ಎಲ್ ಕೆ ಅಡ್ವಾಣಿ ಬಗ್ಗೆ ಮಾತ್ರ ತೀವ್ರ ಬೇಸರವಿದೆ.

ಅಡ್ವಾಣಿ ಅವರಿಗೆ ಒಂದಲ್ಲ ಎರಡು ಬಾರಿ ಶರಣು ಹೊಡೆದೆ, ಆದರೆ, ಅವರು ನನ್ನತ್ತ ತಿರುಗಿ ನೋಡಲೇ ಇಲ್ಲ. ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು. ಅದು ರಾಜಕೀಯ ಪಿತೂರಿ ಎಂದು ಸಾರಿ ಹೇಳಿದೆ ಅವರು ಕೇಳಲೇ ಇಲ್ಲ.

ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಂಡ ನನ್ನ ಮೇಲೆ ಅಡ್ವಾಣಿ ಸಿಟ್ಟಾಗಿದ್ದು ಏಕೆ ಇನ್ನೂ ತಿಳಿಯುತ್ತಿಲ್ಲ. ನಾನು ನಿರಪರಾಧಿ ಎಂಬುದು ಅವರಿಗೂ ತಿಳಿದಿದೆ ಆದರೆ, ಅವರಿಗೆ ಇನ್ನೂ ಸಂಪೂರ್ಣವಾಗಿ ಮನವರಿಕೆಯಾಗಿಲ್ಲ. ನಾನು ಈ ಬಗ್ಗೆ ಇನ್ನು ಹೆಚ್ಚು ಹೇಳಲಾರೆ ಎಂದು ಬಿಎಸ್ ಯಡಿಯೂರಪ್ಪ ನೊಂದು ನುಡಿದರು.

ಸಂಧಾನಕ್ಕೆ ಹೈಕಮಾಂಡ್ ಯತ್ನ: ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಅವರ ಬೆಂಬಲಿಗರು ಹೈಕಮಾಂಡ್ ಮೊರೆ ಹೋಗಿದ್ದಾರೆ. ಪಕ್ಷದ ವರಿಷ್ಠರು ಈ ಬಗ್ಗೆ ಆರೆಸ್ಸೆಸ್ ಮುಖಂಡರ ಸಲಹೆ ಕೇಳಿದ್ದಾರೆ. ಆರೆಸ್ಸೆಸ್ ಮುಖಂಡರ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ. ಬಿಎಸ್ ಯಡಿಯೂರಪ್ಪ ಚುನಾವಣೆ ತನಕ ಬಿಜೆಪಿಯಲ್ಲೇ ಉಳಿಯಲಿದ್ದಾರೆ ಎಂಬ ಸುದ್ದಿಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಲ್ಲಗೆಳೆದಿದ್ದಾರೆ.

ಡಿವಿಎಸ್ ಹೇಳಿಕೆ ಬಗ್ಗೆ: ಆತ ನನ್ನ ಬಳಿ ಬಂದು ತನ್ನನ್ನು ಕೆಎಂಎಫ್ ಅಧ್ಯಕ್ಷ ಮಾಡಿ ಎಂದು ಕೇಳಿಕೊಂಡ. ನಾನು ಆತನನ್ನು(ಡಿವಿ ಸದಾನಂದ ಗೌಡ) ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ಅದರೆ, ಅಧಿಕಾರ ಲಾಲಸೆ ಆತನನ್ನು ಇನ್ನೂ ಬಿಟ್ಟಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಬಸವಕಲ್ಯಾಣದಲ್ಲಿ ಸ್ಥಾಪಿಸಲಾಗಿರುವ 108 ಅಡಿ ಎತ್ತರ ಬೃಹತ್ ಬಸವಣ್ಣ ಮೂರ್ತಿಗೆ ನಮಿಸಿ ಮಾತು ಮುಂದುವರೆಸಿದ ಯಡಿಯೂರಪ್ಪ, ಬಸವಣ್ಣ ಅವರ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಕುಹಕಿಗಳ ನಿಂದನೆಗಳನ್ನು ಸಹಿಸಿ ನೋವು ನುಂಗಿ ಜನರಿಗೆ ನಲಿವನ್ನು ಹಂಚುವುದೇ ನನ್ನ ಕಾಯಕ ಎಂದರು.

ನನ್ನ ಗುರಿ ಸಮಗ್ರ ಕರ್ನಾಟಕದ ಕಲ್ಯಾಣ. ಈಗ ಪಕ್ಷದ ಹಿರಿಯರಿಗಿಂತ ಜನರ ನೆರವು ನನಗೆ ಬೇಕಿದೆ. ನಿಗದಿಯಂತೆ ಹೊಸ ಪಕ್ಷ ಸ್ಥಾಪನೆಯಾಗಲಿದೆ ಇದರಲ್ಲಿ ಅನುಮಾನ ಬೇಡ. ಹೊಸ ಪಕ್ಷಕ್ಕೆ ಸೇರಲು ಬಯಸುವ ಇತರೆ ಪಕ್ಷದ ನಾಯಕರಿಗೆ ಸ್ವಾಗತ ಬಯಸುತ್ತೇನೆ. ಜನ ಸೇವೆಯನ್ನು ಗುರಿಯಾಗಿಟ್ಟುಕೊಂಡು, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವವರಿಗೆ ಮಾತ್ರ ಆದ್ಯತೆ ಎಂದು ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಕೆಜೆಪಿ ಕಚೇರಿ : ಶಿವಮೊಗ್ಗದಲ್ಲಿ ಕರ್ನಾಟಕ ಜನತಾ ಪಕ್ಷ ಕಚೇರಿಗೆ ಶಂಕು ಸ್ಥಾಪನೆ ಹಾಕಿದ ಮೇಲೆ ಬೆಂಗಳೂರಿನಲ್ಲಿ ಕಚೇರಿ ಸ್ಥಾಪನೆಗೆ ಯಡಿಯೂರಪ್ಪ ಅವರ ಪರಿವಾರ ಮುಂದಾಗಿದೆ.

ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸೋಮವಾರ (ಅ.29) ಹೋಮ, ಹವನ ಕಾರ್ಯ ನಡೆದಿದ್ದು, ಮಂಗಳವಾರ ನೂತನ ಕಚೇರಿ ಸ್ಥಾಪನೆ ಮಾಡಲಾಗುತ್ತದೆ ಎಂದು ಯಡಿಯೂರಪ್ಪ ಅವರ ಆಪ್ತ ವಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+