ಕೃಷ್ಣ ಆಗಮನ ಏನು ಸುಖವಿಲ್ಲ : ಸದಾನಂದ ಗೌಡ

ಕೃಷ್ಣ ಅವರ ಆಗಮನದಿಂದ ಕರ್ನಾಟಕ ಕಾಂಗ್ರೆಸ್ ನಲ್ಲಿ ಹಿನ್ನೆಡೆಯಾಗುವುದೇ ಹೊರತು ಹೆಚ್ಚಿನ ಬಲ ಏನು ಸಿಗುವುದಿಲ್ಲ. ಈಗಾಗಲೇ ನಾಯಕತ್ವ ವಿಚಾರದಲ್ಲಿ ಇರುವ ಗೊಂದಲ ಇನ್ನಷ್ಟು ಹೆಚ್ಚಾಗಲಿದೆ ಅಷ್ಟೇ.
ಕೃಷ್ಣ ಅವರು ಏನೇ ಸಮಜಾಯಿಷಿ ಕೊಟ್ಟರೂ, ಕಾಂಗ್ರಸ್ ಚುನಾವಣೆಗೆ ಮುನ್ನವೇ ಹಿನ್ನೆಡೆ ಅನುಭವಿಸಿದೆ ಎಂಬುದು ಅವರ ಆಗಮನದಿಂದ ಸ್ಪಷ್ಟವಾಗಿದೆ ಎಂದು ಸದಾನಂದ ಗೌಡ ಹೇಳಿದರು.
ಈ ನಡುವೆ ಬಿಎಸ್ ಯಡಿಯೂರಪ್ಪ ಅವರ ಪ್ರಾಬಲ್ಯ ಮುರಿಯಲು ಕಾಂಗ್ರೆಸ್ ಹೈಕಮಾಂಡ್ ಕೃಷ್ಣ ಅವರನ್ನು ರಾಜ್ಯಕ್ಕೆ ರವಾನಿಸಿದೆ ಎಂಬ ಸುದ್ದಿ ಇದೆ. ಇದಕ್ಕೆ ಪ್ರತಿಯಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಹೆಚ್ಚಾಗುತ್ತಿದೆ. ಅಕ್ಟೋಬರ್ 30 ರೊಳಗೆ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.
ಬಿಎಸ್ ಯಡಿಯೂರಪ್ಪ ಕೂಡಾ ಒಂದು ರೀತಿ ಮಾನಸಿಕ ಇಬ್ಬಂದಿಗೆ ಸಿಲುಕಿದ್ದಾರೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮನಸ್ಥಿತಿಯಲ್ಲಿ ಬಾಳುವುದು ಕಷ್ಟ. ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದರೂ ಸ್ವಾಗತ ಅಥವಾ ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡಿದರೂ ಸ್ವಾಗತ. ಎರಡು ದೋಣಿಯಲ್ಲಿ ಕಾಲಿಟ್ಟು ಚಲಿಸುವುದು ಸಾಧ್ಯವೇ ಇಲ್ಲ ಎಂದು ಡಿವಿ ಸದಾನಂದ ಗೌಡ ಹೇಳಿದರು.
ಬಿಜೆಪಿಯಲ್ಲಿದ್ದುಕೊಂಡೇ ಪ್ರತ್ಯೇಕ ಪಕ್ಷ ಸ್ಥಾಪನೆ ಮಾತನಾಡುವುದು ಸರಿಯಿಲ್ಲ. ಬ್ಲ್ಯಾಕ್ ಮೇಲ್ ತಂತ್ರ ಒಳ್ಳೆಯದಲ್ಲ. ಯಡಿಯೂರಪ್ಪ ಅವರು ಪಕ್ಷ ತೊರೆಯುವ ಬಗ್ಗೆ ಆದಷ್ಟು ಬೇಗ ನಿರ್ಧರಿಸುವುದು ಒಳ್ಳೆಯದು. ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಈ ರೀತಿ ಇರಸು ಮುರುಸು ಅನುಭವಿಸುವುದು ಒಳ್ಳೆಯದಲ್ಲ. ಆದಷ್ಟು ಬೇಗ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.
ಬಿಎಸ್ ಯಡಿಯೂರಪ್ಪ ಅವರ ಬೆಂಬಲಿಗ ಸಚಿವರು ಇನ್ನೂ ಗೂಟದ ಕಾರಿನಲ್ಲಿ ಓಡಾಡಿಕೊಂಡು ಕೆಜೆಪಿ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಜನ ಎಲ್ಲರನ್ನೂ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಯದೇ ವಿಧಿಯಿಲ್ಲ ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗೂ ಮುನ್ನ ಪಕ್ಷದ ಸಂಘಟನೆಯಾಗಬೇಕಿದ್ದು, ನಿತಿನ್ ಗಡ್ಕರಿ ಅವರು ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದರು












Click it and Unblock the Notifications