12.12.2012 ಪ್ರಳಯದ ಬಗ್ಗೆ ಕೋಡಿಮಠಶ್ರೀ ಹೇಳಿದ್ದೇನು?

12.12.2012ರಂದು ಭೂಮಿ ಪ್ರಳಯವಾಗುತ್ತದೆ, ಜೀವಕಣಗಳು ನಾಶವಾಗುತ್ತದೆ, ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ನಿಷ್ಕ್ರಿಯವಾಗಿ, ಭಸ್ಮವಾಗುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಆದರೆ, ಜನರು ಇದರಿಂದ ವಿಚಲಿತರಾಗುವುದು ಬೇಡ. ಯಾವುದೇ ಕಾರಣಕ್ಕೂ ದೇಶದಲ್ಲಿ ಪ್ರಳಯ ಸಂಭವಿಸುವುದಿಲ್ಲ.
ಮಯಾ ಜನಾಂಗದ ಭವಿಷ್ಯದಂತೆ ಡಿಸೆಂಬರ್ 21, 2012ಕ್ಕೆ ಪ್ರಳಯವಾಗಲಿದೆ. 12.12.2012 ರಂದು ಇದರ ಮೊದಲ ಸೂಚನೆ ಸಿಗಲಿದ್ದು, ಅಂದಿಗೆ ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳಲಿದೆ.
ಡಿ.21 ರಂದು 6 ಗಂಟೆ ನಂತರ ಪ್ರಳಯ ಗ್ಯಾರಂಟಿ ಎಂದು ಎಲ್ಲೆಡೆ ನಂಬಲಾಗಿದೆ. ಆದರೆ, ಡಿ.12, 21 ಬರೀ ದಿನಾಂಕಗಳಾಗಿದ್ದು, ಖಗೋಳ ಕೌತುಕವಾಗಲಿ, ಹವಾಮಾನ ವೈಪರೀತ್ಯವಾಗಲಿ ಜಗತ್ತಿನ ಪ್ರಳಯಕ್ಕೆ ಕಾರಣವಾಗುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಪ್ರಪಂಚದ ಯಾವುದೋ ಮೂಲೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆಯಾದರೂ, ಇಡೀ ಭೂಮಂಡಲ ನಾಶವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಸಾರ್ವಜನಿಕರು ಭಯ ಪಡದೆ ಧೈರ್ಯವಾಗಿ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಬಹುದು ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸೂರ್ಯ ತನ್ನ ಪಥವನ್ನು ಬದಲಿಸುವುದರಿಂದ ಪ್ರಾಕೃತಿಕ ಬದಲಾವಣೆಗಳು ನಿರೀಕ್ಷಿತವಾಗಿದೆ. ಆದರೆ, ಇದನ್ನೇ ಮಾಧ್ಯಮಗಳು ವೈಭವೀಕರಿಸಿ ಜನರ ನಿದ್ದೆಗೆಡಿಸುವುದು ಬೇಡ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟದ ಮೇಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋಡಿಮಠ ಶ್ರೀಗಳು ಆಶೀರ್ವಚನ ನೀಡಿದರು.
ಬಾಗಲಕೋಟೆಯ ಬನಹಟ್ಟಿಯ ರಾಜಶೇಖರ ಮಹಾದೇವಪ್ಪ ಬಿದರಿ ಅವರ ನಿವಾಸದಲ್ಲಿ ಆಗಸ್ಟ್ ತಿಂಗಳಿನಲ್ಲೂ ಇದೇ ರೀತಿ ಸ್ವಾಮೀಜಿಗಳು ಅಭಯ ನೀಡಿದ್ದರು.
ಪ್ರತಿ 770 ವರ್ಷಗಳಿಗೊಮ್ಮೆ ಸೂರ್ಯನ ಪಥ ಬದಲಾಗುತ್ತದೆ. ಭೂಮಧ್ಯೆ ರೇಖೆಗೆ ಸಮೀಪವಾಗುವ ಸೂರ್ಯನಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಶಾಖದ ಕಾರಣಕ್ಕೆ ಹಿಮ ಭಾರಿ ಪ್ರಮಾಣದಲ್ಲಿ ಕರಗುತ್ತದೆ. ಇದು ಪ್ರಕೃತಿ ವಿಕೋಪಕ್ಕೆ ತಿರುಗಿ ಶೀತಲ ರಾಷ್ಟ್ರಗಳಿಗೆ ತೊಂದರೆ ಆಗುವುದು ಸಹಜ'
ಹೆಚ್ಚುತ್ತಿರುವ ಅಂತರ್ಜಲದ ಬಳಕೆಯ ಕಾರಣಕ್ಕೆ ಶಿಲಾಗೋಳಕ್ಕೆ ತೀವ್ರ ಧಕ್ಕೆ ಆಗುತ್ತಿದೆ. ಇದರಿಂದ ಭೂಕಂಪದ ತಡೆಗೆ ಅಂತರ್ಜಲ ಬಳಕೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಅಪಾಯ ಶತಸಿದ್ಧ' ಕಾರ್ತಿಕ ಮಾಸದೊಳಗೆ ಗಂಭೀರ ಅವಘಡವೊಂದು ಕಾದಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಪಟಿ ಕಾವಿಧಾರಿಗಳ ಬಗ್ಗೆ : ಹಿಂದೂ ಸಂಪ್ರದಾಯದಲ್ಲಿ ಕಾವಿಧಾರಿಗಳಿಗೆ ವಿಶಿಷ್ಟ ಸ್ಥಾನವಿದೆ. ಕೆಲವು ಕಪಟಿಗಳು ವೈಯಕ್ತಿಕ ಸುಖಕ್ಕಾಗಿ ಕಾವಿಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಧರ್ಮಕ್ಕೆ ಮಸಿ ಬಳಿದಿದ್ದಾರೆ ಎಂದು ಕಾಳಿಕಾ ಮಠದ ಸ್ವಾಮೀಜಿ ಹೆಸರು ಹೇಳದೆ ಟೀಕಿಸಿದರು.
ಮನುಷ್ಯನ ಬದುಕಿನ ಎಲ್ಲಾ ಸುಖಗಳನ್ನು ತ್ಯಾಗ ಮಾಡಿ, ತೊಡುವ ಕಾವಿ ಬಟ್ಟೆ ನೊಂದವರ ಬಾಳಿನ ದೀಪವಾಗಬೇಕು. ಕಪಟಿಗಳಿಂದ ಸನ್ಯಾಸಿಗಳು ಸಮಾಜದಲ್ಲಿ ತಲೆ ತಗ್ಗಿಸುವಂತಾಗಬಾರದು.
ಸ್ವಾಮೀಜಿಯಾಗಿ ದೀಕ್ಷೆ ತೆಗೆದುಕೊಂಡ ಮೇಲೆ ತಮ್ಮ ಸುಖವನ್ನು ತ್ಯಜಿಸಬೇಕು. ಲೋಕದ ಕಲ್ಯಾಣ ಕಾರ್ಯಕ್ಕಾಗಿ ದುಡಿಯಬೇಕು. ಸುಳ್ಳು, ಭ್ರಷ್ಟತೆ ಹಾಗೂ ಆಸೆಯಿಂದ ದೂರ ಉಳಿಯಬೇಕಿದು ಎಂದು ಸ್ವಾಮೀಜಿ ಹೇಳಿದರು.











Click it and Unblock the Notifications