ಚರಂಡಿ ಪಾಲಾದ ರಥ- ಬೆಂಗಳೂರು ಟೆಕ್ಕಿ ಸಾವು

ಒಂದು ಶತಮಾನದಿಂದಲೂ ತಾಲೂಕಿನ ಲೋಕಾಪುರದ ಜನತೆಗೆ ವೆಂಕಟೇಶ್ವರ ರಥೋತ್ಸವ ಅಂದರೆ ಬಹಳ ಭಕ್ತಿ. ಇಡೀ ಸುತ್ತಮುತ್ತಲ ಊರಿನವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಉದ್ಯೋಗವನ್ನರಸಿ ಪರಸ್ಥಳಗಳಿಗೆ ಹೋದವರೂ ವರ್ಷಕ್ಕೊಮ್ಮೆ ಈ ರಥೋತ್ಸವದಲ್ಲಿ ಹಾಜರಾಗುವುದು ಸಂಪ್ರದಾಯ.
ಹಾಗೆಂದೇ ಮೊನ್ನೆ ವಿಜಯದಶಮಿಯಂದು ವೆಂಕಟೇಶ್ವರನ ರಥೋತ್ಸವ ನಡೆದಿತ್ತು. ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ವಿಠ್ಠಲ ಭೀಮಸೇನ ಬಬಲಾದಿ (35) ಹುಟ್ಟೂರಾದ ಲೋಕಾಪುರಕ್ಕೆ ಸಂಭ್ರಮದಿಂದ ತೆರಳಿದ್ದರು. ಆದರೆ ಅಲ್ಲಿಂದ ಅವರು ಮರಳಿ ಬಾರದ ಲೋಕಕ್ಕೆ ಜಾರಿಕೊಂಡಿದ್ದಾರೆ.
ವಿಠ್ಠಲ ಭೀಮಸೇನರ ತಂದೆ ಗ್ರಾಮದ ದೇಸಾಯಿ ಗಲ್ಲಿಯಲ್ಲಿರುವ ವೇಂಕಟೇಶ್ವರ ದೇವಸ್ಥಾನದ ಅರ್ಚಕರೂ ಹೌದು. ಹಾಗಾಗಿ, ವಿಠ್ಠಲ ಭೀಮಸೇನ ಅಪ್ಪನ ಪಕ್ಕದಲ್ಲೆ ಭಕ್ತಿಯಲ್ಲಿ ತನ್ಮಯನಾಗಿ ಕುಳಿತಿದ್ದಾಗ ಜವರಾಯ ಬಂದು ಆತನನ್ನು ಎಳೆದುಕೊಂಡು ಹೋಗಿದ್ದಾನೆ. ಆತ ಕುಳಿತಿದ್ದ ರಥ ಯಾವುದೋ ಮಾಯದಲ್ಲಿ ಸೀದಾ ಚರಂಡಿಗೆ ಇಳಿದು ಅನಾಹುತ ಸಂಭವಿಸಿದೆ.
ರಥ ಚರಂಡಿಗೆ ಇಳಿಯುತ್ತಿದ್ದ ಅದರ ಮೇಲೆ ಕುಳಿತಿದ್ದವರು ಕೆಳಗೆ ಉರುಳಿದ್ದಾರೆ. ವಿಠ್ಠಲ ಭೀಮಸೇನ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಇತರೆ 8 ಮಂದಿಗೂ ತೀವ್ರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಬಾಗಲಕೋಟೆ ಹಾಗೂ ಮುಧೋಳದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ರಥಬೀದಿಯು ಇಕ್ಕಟ್ಟಾಗಿದ್ದರಿಂದ ರಥ ಎಳೆಯುವವರಿಗೆ ನಿಯಂತ್ರಣ ತಪ್ಪಿ ರಥ ಚರಂಡಿಗಿಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಥ ವಾಲುತ್ತಿದ್ದಂತೆಯೇ ಮೇಲಿನಿಂದ ಬೀಳುತ್ತೇನೆ ಎಂಬ ಭಯದಿಂದ ರಥದ ಮೇಲೆ ಕುಳಿತಿದ್ದ ವಿಠ್ಠಲ ಭೀಮಸೇನ ರಥದಿಂದ ಜಿಗಿದಿದ್ದಾರೆ. ಗೋಡೆ ಮತ್ತು ರಥದ ಮಧ್ಯೆ ಸಿಲುಕಿದಾಗ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ವಿಠ್ಠಲ ಭೀಮಸೇನ ಸಾವನ್ನಪ್ಪಿದರು.












Click it and Unblock the Notifications