Facebook ಲವ್ವು ಅವನ ಪ್ರಾಣವನ್ನೇ ನೀಗಿತು

ಕೆ.ಆರ್. ಪುರ ನಿವಾಸಿ ಶ್ರೀನಿವಾಸನನ್ನೇ ತೆಗೆದುಕೊಳ್ಳಿ. ಇನ್ನೂ 24ರ ಹರಯದ ಈ ಯುವಕ ಭಗ್ನ ಪ್ರೇಮದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದಲ್ಲಿ ಗುರುವಾರ ಈ ಘಟನೆ ನಡೆದಿದೆ. ಅವಳೋ ಪದವೀಧರೆ, ಇವನೋ ಪಿಯುಸಿ ಫೇಲು. ಇಲ್ಲಿ ತಪ್ಪು Facebook ದಾ ಅಥವಾ ಶ್ರೀನಿವಾಸನದಾ ಅಥವಾ ಅವನನ್ನು ಪ್ರೀತಿಸಿ, ಕೈಬಿಟ್ಟ ಹುಡುಗಿಯದಾ?
ಬಿ. ಶ್ರೀನಿವಾಸ್ ತನ್ನ ಮನೆಯಲ್ಲಿ ನಿನ್ನೆ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ವಾಹನಗಳಿಗೆ ನಾಮಫಲಕ ಬರೆಯುವ ಕಂಪ್ಯೂಟರ್ ಅಂಗಡಿಯಿಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್‌ಬುಕ್ ಟ್ರಾಜಿಡಿ ಲವ್:
ಮೂರು ವರ್ಷಗಳ ಹಿಂದೆ ಶ್ರೀನಿವಾಸನಿಗೆ ಜಯಮಹಲ್ ಬಡಾವಣೆಯ ಕೋಮಲಾ (ಹೆಸರು ಬದಲಾಯಿಸಲಾಗಿದೆ) ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಳು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿತ್ತು. ಆದರೆ ಈಚೆಗೆ ಶ್ರೀನಿವಾಸನ ಜತೆ ಆಕೆ ಸಂಪರ್ಕ ಕಡಿದುಕೊಂಡಿದ್ದಳು. ಈ ಬಗ್ಗೆ ಇಬ್ಬರ ಮಧ್ಯೆ ಇತ್ತೀಚೆಗೆ ಜಗಳವೂ ನಡೆದಿತ್ತು ಎನ್ನಲಾಗಿದೆ. ಇದರಿಂದ ಜಿಗುಪ್ಸೆಗೊಂಡು ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್‌ನಲ್ಲಿ ಪ್ರೇಮವೃತ್ತಾಂತ:
ಶ್ರೀನಿವಾಸ ಬರೆದಿಟ್ಟಿದ್ದ ಮರಣ ಪತ್ರ ದೊರೆತಿದೆ. ಅದು ಈತನ ಪ್ರೇಮವೃತ್ತಾಂತದ ಬೆಳಕು ಚೆಲ್ಲಿದೆ. ತನ್ನ ಮೂರು ವರ್ಷದ ಪ್ರೇಮ ಕತೆ ಕುರಿತು ಆತ ಸಾವಕಾಶವಾಗಿ, ವಿವರವಾಗಿ ಬರೆದಿಟ್ಟಿದ್ದಾನೆ. ಪ್ರೀತಿಸಿದವಳು ಕೈ ಕೊಟ್ಟಿದ್ದರಿಂದ ಜೀವನ ಬೇಸರವಾಗಿದೆ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಆತ ಬರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications