ಬಿಎಸ್‌ವೈ ಹೆತ್ತವ್ವನಿಗೆ ದ್ರೋಹ ಮಾಡೊಲ್ಲ: ಸಿಟಿ ವಿಶ್ವಾಸ

ಯಡಿಯೂರಪ್ಪನವರೇ ಹೇಳುತ್ತಿದ್ದರು ಪಕ್ಷ ಎಂಬುದು ಕಾರ್ಯಕರ್ತರಿಗೆ ತಾಯಿ ಇದ್ದಂತೆ. ಆ ತಾಯಿಗೆ ಯಾರೂ ದ್ರೋಹ ಮಾಡಬಾರದು ಎಂದು ಸ್ವತಃ ಯಡಿಯೂರಪ್ಪ ಅವರೇ ಅನೇಕ ಸಾರಿ ಹೇಳಿದ್ದಾರೆ. ಹೀಗಾಗಿ ಈಗ ಅವರೇ ಪಕ್ಷ ತೊರೆದು ಹೆತ್ತ ತಾಯಿಗೆ ದ್ರೋಹ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ರವಿ ಸುದ್ದಿಗೋಷ್ಠಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಬಿಜೆಪಿಗೆ ರಾಜ್ಯದಲ್ಲಿ ಶಕ್ತಿ ತುಂಬಿದ್ದು ಯಡಿಯೂರಪ್ಪನವರು. ಆ ಮಾತನ್ನು ಯಾರೂ ಅಲ್ಲಗಳೆಯಲಾರರು. ಇದೇ ವೇಳೆ ಸಾಮಾನ್ಯ ಮನುಷ್ಯನಾಗಿದ್ದ ಯಡಿಯೂರಪ್ಪಗೆ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ ಎಂಬುದನ್ನೂ ಯಾರೂ ಮರೆಯಬಾರದು. ಹೀಗಾಗಿ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅಧಿಕಾರ ಇಲ್ಲದಿದ್ದಾಗಲೂ ಗೌರವ, ಆದ್ಯತೆ ಅವರಿಗೆ ಸಂದಾಯವಾಗಿದೆ. ಹಾಗಘಾಇ ಬಿಜೆಪಿ ತೊರೆಯುವ ಕೆಲಸ ಅವರು ಮಾಡುವುದಿಲ್ಲ ಎಂದು ರವಿ ಹೇಳಿದರು.
1991ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ ಸೋತರೂ ಅವರ ರಾಜೀನಾಮೆ ಕೇಳದೆ ಪಕ್ಷ ಬೆಂಬಲ ನೀಡಿತ್ತು. 1999ರಲ್ಲಿ ನಡೆದ ಉಪಚುನಾವಣೆಯಲ್ಲೂ ಯಡಿಯೂರಪ್ಪ ಅವರು ಮತ್ತೆ ಸೋತಾಗ ಕೂಡಾ ಪಕ್ಷ ಅವರ ಬೆಂಬಲಕ್ಕೆ ನಿಂತು ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿತು. ವಿಧಾನಸಭೆ ವಿಪಕ್ಷ ನಾಯಕ ಸ್ಥಾನವನ್ನೂ ನೀಡಿತು. ಪಕ್ಷದ ಮೂಲಕ ಉಪಮುಖ್ಯಮಂತ್ರಿಯಾದರು. ಬಳಿಕ ಮುಖ್ಯಮಂತ್ರಿಯಾದರು. ಇಷ್ಟೆಲ್ಲ ಅವಕಾಶಗಳನ್ನು ನೀಡಿದ ಪಕ್ಷವನ್ನು ಅವರು ಮರೆಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅನಂತ್ ಕುಮಾರ್ ಮತ್ತು ಈಶ್ವರಪ್ಪ ಅವರು ಯಡಿಯೂರಪ್ಪ ಅಧಿಕಾರದಿಂದ ಇಳಿಯುವಂತಹ ಕೆಲಸ ಮಾಡಿಲ್ಲ. ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಬಿಜೆಪಿ ಕೈಯಲ್ಲಿಲ್ಲ. ಇದಕ್ಕೆ ನಮ್ಮವರು ಕಾರಣವಲ್ಲ. ಅದಕ್ಕೆ ಯಡಿಯೂರಪ್ಪ ಅವರೇ ಹೊಣೆ ಎಂದು ರವಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.












Click it and Unblock the Notifications