ಛೇ! ಪಾಪು ಇಲ್ಲದೆ ಸುವರ್ಣಸೌಧ ಉದ್ಘಾಟನೆ

ಉತ್ತರ ಕರ್ನಾಟಕ ಭಾಗದಲ್ಲಿ ಸುವರ್ಣ ಸೌಧ ಉದ್ಘಾಟನೆಗೊಂಡಿರುವುದು ಅತ್ಯಂತ ಸಂಭ್ರಮದ ಸಂಗತಿ. ಈ ಮೂಲಕ ಗಡಿಭಾಗದಲ್ಲಿ ಕನ್ನಡ ಕಹಳೆ ನಿರಂತರವಾಗಿ ಮೊಳಗುತ್ತಿರಲಿ. ಗಡಿಭಾಗದ ಅಭಿವೃದ್ಧಿಗೆ ಇದು ನಾಂದಿಯಾಗಲಿ.
ಅದರೆ, ಗಡಿನಾಡಿಗಾಗಿ ಸದಾಕಾಲ ಹೋರಾಟ ನಡೆಸಿ, ಶಕ್ತಿಸೌಧ ಬೇಕು ಎಂದು ಕೂಗೆತ್ತಿದ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರಿಗೆ ಸರ್ಕಾರ ಮನ್ನಣೆ ನೀಡದಿರುವುದು ದೊಡ್ಡ ದುರಂತ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕರ್ನಾಟಕ ವಿಧಾನಸಭಾ ಅಧಿವೇಶನ ನಡೆಸಬೇಕು, ಸರ್ಕಾರ ಗಡಿಭಾಗಕ್ಕೆ ಸರಿಯಾದ ಸವಲತ್ತುಗಳನ್ನು ನೀಡಬೇಕು ಎಂದು ಕಳೆದ 50 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ.
ಈ ಹೋರಾಟದ ಅಗ್ರಗಣ್ಯ ನಾಯಕ ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಸುವರ್ಣ ವಿಧಾನಸೌಧ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕನಿಷ್ಠ ಸೌಜನ್ಯ ತೋರದಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ವಾಟಾಳ್ ಹೇಳಿದರು.
ವಿಧಾನಸೌಧ ಎಂದರೆ ಜನಪ್ರತಿನಿಧಿಗಳು ಜನರ ಸಮಸ್ಯೆ, ನಾಡಿನ ಏಳಿಗೆ ಬಗ್ಗೆ ಚಿಂತನೆ, ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ತಾಣವಾಗಿದ್ದು, ಪಕ್ಷದ ಕಚೇರಿಯಲ್ಲ ಎಂಬುದು ನೆನಪಿರಲಿ.
ಕನ್ನಡಿಗರ ಹಣೆಬರಹವೇ ಇಷ್ಟು. ಹೋರಾಟ ಮಾಡುವವರು ಒಬ್ಬರು ಸಂಭ್ರಮ ಪಟ್ಟು ಹಾರ ತುರಾಯಿ ಹಾಕಿಕೊಂಡು ಮೆರೆಯುವವರು ಮತ್ತೊಬ್ಬರು.
ಸುವರ್ಣ ಸೌಧ ಉದ್ಘಾಟನೆ ಐತಿಹಾಸಿಕ ಕಾರ್ಯಕ್ರಮ ಎಂಬುದು ಶೆಟ್ಟರ್ ಸರ್ಕಾರಕ್ಕೆ ಮರೆತು ಹೋಯಿತೆ? ಕನ್ನಡ ನಾಡು ನುಡಿಗಾಗಿ ಶ್ರಮಿಸಿರುವ ಸಾಹಿತಿಗಳು, ಹೋರಾಟಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಿತ್ತು.
ವೇದಿಕೆ ಆಹ್ವಾನ ಸಿಗದಿದ್ದರೂ ಕನಿಷ್ಠ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಸುವರ್ಣ ಸಂಭ್ರಮವನ್ನು ಕಣ್ಣಾರೆ ನೋಡಿ ಆನಂದ ಪಡುತ್ತಿದ್ದೆವು. ಸರ್ಕಾರ ನಿರ್ಲಕ್ಷ್ಯ ಧೋರಣೆ ಬೇಸರ ತರಿಸಿದೆ.
ಈ ನಾಡಿನಲ್ಲಿ ಹೋರಾಟಗಾರರಿಗೆ ಸರ್ಕಾರ ಯಾವುದೇ ಮೌಲ್ಯ, ಮನ್ನಣೆ ನೀಡುವುದಿಲ್ಲ ಎಂದೆನಿಸುತ್ತಿದೆ ಎಂದು ವಾಟಾಳ್ ನೊಂದು ನುಡಿದರು.












Click it and Unblock the Notifications